ಶಿವಮೊಗ್ಗ: ಸಮಾಜದ ಎಲ್ಲ ವರ್ಗಗಳು ಶೋಷಣೆಗಳಿಂದ ಮುಕ್ತವಾಗಿ ಬದುಕಲು ಅರಿವು ಅಗತ್ಯ. ದಾರ್ಶನಿಕರಾಗಿದ್ದ ಬುದ್ಧ, ಬಸವಣ್ಣ, ಅಂಬೇಡ್ಕರ್ (Dr. Ambedkar) ಸಮಾಜದ ಸಮಸ್ಯೆಗಳನ್ನು ನಿವಾರಿಸಲು ಆತ್ಮದ ಅರಿವು ದಿವ್ಯೌಷಧವಾಗಿದೆಯೆಂದು ಸಾರಿದವರು. ಆ ಮೂಲಕ ಸಮ ಸಮಾಜವನ್ನು ಕಟ್ಟ ಬಯಸಿದವರು ಎಂದು ವೀರಾಪುರ ಹಿರೇಮಠದ ಡಾ.ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ವಿಶ್ವವಿದ್ಯಾಲಯ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ಡಾ.ಅಂಬೇಡ್ಕರ್ ಚಿಂತನ-ಮಂಥನ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಕಟ್ಟ ಬಯಸಿದ ಸಮಾಜ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ಇದನ್ನೂ ಓದಿ: ಜೀವ ಕೊಟ್ಟ ತಂದೆಗೆ ಮರುಜನ್ಮ ಕೊಟ್ಟ ಮಗಳು; ಕಾನೂನು ತೊಡಕನ್ನೂ ಮೀರಿ, ಅಪ್ಪನಿಗೆ ಲಿವರ್ ದಾನ
ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ಜಾತಿ, ಧರ್ಮಗಳಿಂದ ಮೀರಿದ ಬೆಳಕುಗಳು. ಜಗತ್ತಿನ ಮಹಾನ್ ದಾರ್ಶನಿಕರು. ಶಿಕ್ಷಣ ಮತ್ತು ಸಂಸ್ಕಾರಗಳಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆಂದು ಸಾರಿದವರು. ಸಮ ಸಮಾಜದ ನಿರ್ಮಾಣಕ್ಕಾಗಿ ಸಂಪೂರ್ಣ ಸಮರ್ಪಿಸಿಕೊಂಡವರು. ಅವರ ಬದುಕು, ಚಿಂತನೆಗಳು ಸರ್ವ ಕಾಲಕ್ಕೂ ಅನುಕರಣೀಯ ಎಂದು ತಿಳಿಸಿದರು.
ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ಸಾಮರಸ್ಯಭರಿತ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದವರು. ಇವರ ಚಿಂತನೆಗಳು ವ್ಯಕ್ತಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಂಥವು. ಕುವೆಂಪು ವಿವಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳ ಕುರಿತ ಡಿಪ್ಲೊಮಾ ಪದವಿಯನ್ನು ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು ಎಂದರು.
ಇದನ್ನೂ ಓದಿ: Operation Dost: ಭೂಕಂಪಪೀಡಿತ ಟರ್ಕಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಿದ ಭಾರತೀಯ ತಂಡಗಳಿಗೆ ಮೋದಿ ಸೆಲ್ಯೂಟ್
ಕನಕಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕ ಯುಗಧರ್ಮರಾಮಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಮಾತನಾಡಿದರು. ಪ್ರಾಂಶುಪಾಲ ಡಾ.ಎಚ್.ಎಂ.ಧರ್ಮೇಗೌಡ ಡಾ.ವಸಂತಕುಮಾರ್, ನಾಗರಾಜ್ ಜಿ. ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.