Site icon Vistara News

Shivamogga News: ಹಲಸಿನಕೊಪ್ಪ ಗ್ರಾಮದಲ್ಲಿ ಮರು ಅರಣ್ಯೀಕರಣಕ್ಕೆ ಒತ್ತಾಯ

Forced for reforestation in Halasinakoppa village at soraba

ಸೊರಬ: ತಾಲೂಕಿನ ಹಲಸಿನಕೊಪ್ಪ ಗ್ರಾಮದಲ್ಲಿ ಕಾಡು ಕಡಿದು ಅತಿಕ್ರಮಣ (Encroachment) ಮಾಡಿದವರನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಅಲ್ಲದೇ ಪರಿಸರ ಕಾಯ್ದೆಗಳು (Environmental Acts) ಉಲ್ಲಂಘನೆಯಾಗಿದ್ದು, ಮರು ಅರಣ್ಯೀಕರಣಕ್ಕೆ ಕಂದಾಯ ಇಲಾಖೆ (Revenue Department) ಮತ್ತು ಅರಣ್ಯ ಇಲಾಖೆ (Forest Department) ಮುಂದಾಗದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಎಚ್ಚರಿಸಿದರು.

ಬುಧವಾರ ತಾಲೂಕಿನ ಹಲಸಿನಕೊಪ್ಪ (ದೂಗೂರು) ಗ್ರಾಮದ ಸರ್ವೆ ನಂ. 4ರಲ್ಲಿ ವೃಕ್ಷಲಕ್ಷ ಆಂದೋಲನದ ವತಿಯಿಂದ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪರಿಸರ ಜಾಗೃತಿ ಟ್ರಸ್ಟ್, ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಹಲಸಿನಕೊಪ್ಪ ಗ್ರಾಮದ ಸರ್ವೆ ನಂ. 4ರಲ್ಲಿ ಸುಮಾರು 150ಕ್ಕೂ ಹೆಚ್ಚು ಎಕರೆ ಗೋಮಾಳವಿದ್ದು, ಇಂತಹ ಪ್ರದೇಶವನ್ನು ಗ್ರಾಮಸ್ಥರು ಹಗಲು-ರಾತ್ರಿ ಕಾದು ರಕ್ಷಿಸಿಕೊಂಡು ಬಂದಿದ್ದಾರೆ. ಆದರೆ ಕೆಲವು ಕಾಡುಗಳ್ಳರು ಅರಣ್ಯ ನಾಶ ಮಾಡಿ ಅತಿಕ್ರಮಣ ಮಾಡಿದ್ದಾರೆ. ಅಂಥವರ ವಿರುದ್ಧ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಾನೂನು ಜಾರಿಗೊಳಿಸಬೇಕು ಎಂದರು.

ಇದನ್ನೂ ಓದಿ: Vijayanagara News : ಹಂಪಿಯ ಬೀದಿಬದಿ ವ್ಯಾಪಾರಿಯ ಪುತ್ರ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್‌

ಈಚೆಗೆ ಸಿಪಿಟಿ ಒಳಗೆ ಪ್ರವೇಶಿಸಿ ಗ್ರಾಮಸ್ಥರು ಕಾಯ್ದುಕೊಂಡು ಬಂದಿದ್ದ ಸುಮಾರು ಎರಡು ಎಕರೆ ಮರಗಿಡಗಳನ್ನು ಪಕ್ಕದ ಬೇಳೂರು ಗ್ರಾಮದ ಒಬ್ಬರು ದ್ವಂಸ ಮಾಡಿ ಅಡಿಕೆ ಬೆಳೆದಿದ್ದು ಜಿಲ್ಲಾಧಿಕಾರಿಗಳ ತನಕವೂ ದೂರು ಹೋಗಿತ್ತು. ಆ ವ್ಯಕ್ತಿಗೆ ಮಂಜೂರು ಮಾಡಿಕೊಟ್ಟಿರಲಿಲ್ಲ. ಆದಾಗ್ಯೂ ಪುನಃ ವೃಕ್ಷಾರೋಪಣ ಕಾರ್ಯಕ್ರಮದ ಹಿನ್ನಲೆಯಲ್ಲಿ ಮತ್ತೆ ಅಡಿಕೆ ಗಿಡ ನೆಟ್ಟಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಇಲಾಖೆ ಹೆಚ್ಚಿನ ಗಮನ ಹರಿಸಬೇಕು. ಅಮೂಲ್ಯ ಕಾನು ಉಳಿಸಬೇಕು ಎಂದರು.

ಇದಕ್ಕೂ ಮೊದಲು ಹಲಸಿನಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವೃಕ್ಷಾರೋಪಣ ನೆರವೇರಿಸಿ, ನಂತರ ಸನಂ 4ರ ಗೋಮಾಳದ ವರೆಗೆ ವೃಕ್ಷಜಾಥಾ ನಡೆಸಲಾಯಿತು. ಜಾಥಾಕ್ಕೆ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಪಾಟೀಲ್ ಚಾಲನೆ ನೀಡಿದರು.

ಇದನ್ನೂ ಓದಿ: Depression: ಖಿನ್ನತೆಯನ್ನು ಗುರುತಿಸಿ, ಅದರಿಂದ ಹೊರ ಬರುವುದು ಹೇಗೆ?

ಜೀವವೈವಿಧ್ಯ ಸಮಿತಿ, ಗ್ರಾಪಂ, ತಾಪಂ, ಕಂದಾಯ, ಅರಣ್ಯ ಇಲಾಖೆ ಕಾನು ಪ್ರದೇಶಕ್ಕೆ ರಕ್ಷಿತ ಜೇನು ಕಾನು ಎಂದು ಘೋಷಿಸಿ ನಾಮಫಲಕವನ್ನು ಅಳವಡಿಸಲಾಯಿತು.

ಜೀವ ವೈವಿದ್ಯ ಮಂಡಳಿ ಪಿಬಿಆರ್ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾತಿನ ಚಕಮಕಿ

ಹಲಸಿನಕೊಪ್ಪ ಗ್ರಾಮದ ಸರ್ವೆ ನಂ. 4ರ ಕಾಡು ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಗಿಡ ನೆಡುವ ಸಂದರ್ಭದಲ್ಲಿ ಅತಿಕ್ರಮಣ ನಡೆಸಿದವರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳದಲ್ಲಿ ಹಾಜರಿದ್ದ ತಹಸೀಲ್ದಾರ್ ಹುಸೇನ್ ಸರಕಾವಸ್, ಸ್ಥಳ ಮತ್ತು ದಾಖಲೆ ಪರಿಶೀಲನೆ ನಡೆಸಿ, ಕಾಡು ಅತಿಕ್ರಮಣದಾರರಿಗೆ ಬಗರ್‌ ಹುಕುಂ ಸಮಿತಿ ಭೂ ಮಂಜೂರಾತಿಯನ್ನು ವಜಾಗೊಳಿಸಿದೆ. ಸರ್ವೆ ನಂ. 4 ಪ್ರಸ್ತುತ ಸರ್ಕಾರಿ ಸ್ವಾಮ್ಯದಲ್ಲಿದೆ. ಇಲ್ಲಿ ಯಾವುದೇ ಸಾಗುವಳಿ, ಅಕ್ರಮ ಕಾಡು ಕಡಿತಲೆ ಇತ್ಯಾದಿ ಚಟುವಟಿಕೆಯನ್ನು ಯಾರೂ ನಡೆಸುವಂತಿಲ್ಲ. ಈಗಿರುವ ಸ್ಥಿತಿಯನ್ನು ಉಳಿಸಿಕೊಳ್ಳಬೇಕು. ಉಲ್ಲಂಘನೆ ನಡೆದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: KL Rahul: ರಾಹುಲ್​ ಕಮ್​ಬ್ಯಾಕ್​ಗೆ ವೇದಿಕೆ ಸಜ್ಜು; ಈ ಸರಣಿಯಲ್ಲಿ ಆಡುವುದು ಖಚಿತ

ಈ ಸಂದರ್ಭದಲ್ಲಿ ಶಿವಮೊಗ್ಗ ಪರಿಸರ ಸಂಘಟನೆಯ ಬಿ.ಎಂ. ಕುಮಾರಸ್ವಾಮಿ, ಬಾಲಕೃಷ್ಣ ನಾಯ್ಡು, ತಡಸ ಭೀಮರಾವ್, ಎಸ್.ಬಿ. ಅಶೋಕ್‍ಕುಮಾರ್, ರಾಜ್ಯ ಜೀವ ವೈವಿಧ್ಯ ಮಂಡಳಿ ತಜ್ಞ ಪ್ರೀತಂ, ಮಾಜಿ ಸದಸ್ಯ ಕೆ. ವೆಂಕಟೇಶ್, ಕಾರ್ತೀಕ್, ಪರಿಸರ ಜಾಗೃತಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೀರೇಶ್‍ಗೌಡ, ತಾಪಂ ಅಧಿಕಾರಿ ಸೀಮಾ, ಗ್ರಾಪಂ ಅಧ್ಯಕ್ಷೆ ತುಳಸಿ, ಪಿಡಿಒ ನಾಗರಾಜ್, ಸಾಮಾಜಿಕ ಅರಣ್ಯ ಆರ್.ಎಫ್.ಒ. ಸಂಜಯ್, ಸೊರಬ ಎಸ್.ಐ. ನಾಗರಾಜ್, ಕಂದಾಯ, ಅರಣ್ಯ, ತಾಪಂ ಗ್ರಾಪಂ ಅಧಿಕಾರಿಗಳು ಸಿಬ್ಬಂದಿ, ಗ್ರಾಮ ಪ್ರಮುಖರಾದ ರಮೇಶ್, ರಾಜಾರಾಂ, ಗ್ರಾಮಾಧ್ಯಕ್ಷ ಪರಶುರಾಮ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Exit mobile version