ರಿಪ್ಪನ್‌ಪೇಟೆ: ಮನೆಯಲ್ಲಿಯೇ ಇದ್ದ ವಸ್ತುಗಳನ್ನು ಬಳಸಿ ಗ್ರಾಮೀಣ ಪ್ರತಿಭೆಯೊಂದು ಸೌರ ಆಧಾರಿತ ಹುಲ್ಲು ಕಟಾವು ಯಂತ್ರ (Solar Based Grass Cutting Machine) ಕಂಡು ಹಿಡಿದಿದ್ದು, ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ರಿಪ್ಪನ್‌ಪೇಟೆ ಸಮೀಪದ ಸಮೀಪದ ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಅಭಿಷೇಕ್ ಸಿದ್ಧಪಡಿಸಿರುವ ಸೌರ ಆಧಾರಿತ ಹುಲ್ಲು ಕಟಾವು ಯಂತ್ರ, ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಇದನ್ನೂ ಓದಿ: First Light: 1.6 ಕೋಟಿ ಕಿಮೀ ದೂರದ ಬಾಹ್ಯಾಕಾಶದಿಂದ ಭೂಮಿಗೆ ಬಂತು ಮೊದಲ ಲೇಸರ್ ಸಂದೇಶ!
ಮನೆಯಲ್ಲಿಯೇ ಲಭ್ಯವಿದ್ದ ಸೋಲಾರ್ ಪ್ಲೇಟ್, ಕಟ್ ಪೀಸ್ ಕಬ್ಬಿಣದ ಸಹಾಯದಿಂದ ಒಂದು ಸಾವಿರ ರೂ. ಖರ್ಚಿನಲ್ಲಿ ಈ ಯಂತ್ರವನ್ನು ಸಿದ್ಧಪಡಿಸಲಾಗಿದ್ದು, ವಿಜ್ಞಾನದ ಶಿಕ್ಷಕ ಮಹೇಶ್ ವಿದ್ಯಾರ್ಥಿ ಅಭಿಷೇಕ್‌ಗೆ ಮಾರ್ಗದರ್ಶನ ನೀಡಿದ್ದಾರೆ. ಮನೆಯ ಸುತ್ತಮುತ್ತ ಬೆಳೆದಂತಹ ಹುಲ್ಲುಗಳನ್ನು ಕಡಿಮೆ ವೆಚ್ಚದ ಈ ಸೋಲಾರ್ ಯಂತ್ರದ ಮೂಲಕ ಕಟಾವು ಕಾರ್ಯಕ್ಕೆ ಬಳಸಬಹುದಾಗಿದೆ.
ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಕ್ಕಿ ನಿವಾಸಿಗಳಾದ ಸತೀಶ್ ಹಾಗೂ ಆಶಾ ದಂಪತಿಗಳ ಪುತ್ರನಾದ ಅಭಿಷೇಕ್ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ.
ಈ ಕುರಿತು ಮಾತನಾಡಿದ ವಿದ್ಯಾರ್ಥಿ ಅಭಿಷೇಕ್, ಇಂದಿನ ಪೀಳಿಗೆಯಲ್ಲಿ ಪ್ರಮುಖ ಸಮಸ್ಯೆಗಳೆಂದರೆ ಮಾಲಿನ್ಯ, ವಿದ್ಯುತ್ ಕಡಿತ, ದುಬಾರಿ ತೈಲ ಬೆಲೆ. ಹೀಗಾಗಿ ಈ ಸಮಸ್ಯೆಗಳಿಂದ ಹೊರಬರಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಧನದ ಬಗ್ಗೆ ಯೋಚಿಸಿದ್ದೇನೆ. ಆದ್ದರಿಂದ ನಾನು ಸೌರಚಾಲಿತ ಹುಲ್ಲು ಕಟ್ಟರ್ ಯಂತ್ರ ಅಭಿವೃದ್ಧಿಪಡಿಸುವ ಇಂಗಿತ ವ್ಯಕ್ತಪಡಿಸಿದಾಗ ಶಾಲೆಯ ಮುಖ್ಯಗುರು ಶಿವಾಜಿ ಹಾಗೂ ವಿಜ್ಞಾನ ಶಿಕ್ಷಕ ಮಹೇಶ್, ಕನ್ನಡ ಶಿಕ್ಷಕ ಎನ್.ಡಿ. ಹೆಗಡೆ ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿ, ಅಗತ್ಯ ಮಾರ್ಗದರ್ಶಗಳನ್ನು ನೀಡಿದ್ದರಿಂದ ಸೌರಶಕ್ತಿಯಿಂದ ಸಂಪೂರ್ಣ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಯಂತ್ರವನ್ನು ಅಭಿವೃದ್ಧಿ ಪಡೆಸಿದ್ದೇನೆ ಎಂದು ತಿಳಿಸಿದ್ದಾನೆ.
ಈ ಯಂತ್ರಕ್ಕೆ ಡಿಸಿ ಮೋಟಾರ್ ಮಾತ್ರ ನಾನು ಖರೀದಿ ಮಾಡಿದ್ದೇನೆ. ಉಳಿದಂತೆ ಸೋಲಾರ್ ಪ್ಲೇಟ್ , ಕಬ್ಬಿಣ, ಬ್ಯಾಟರಿ ಎಲ್ಲವೂ ಮನೆಯಲ್ಲಿ ಇರುವುದನ್ನೇ ಬಳಸಿದ್ದೇನೆ. ಹೀಗಾಗಿ ಪ್ರತಿಯೊಬ್ಬರು ಇದನ್ನು ಮನೆಯಲ್ಲಿಯೇ ಅಭಿವೃದ್ಧಿಪಡಿಸಿಕೊಂಡು ತಮ್ಮ ಮನೆಯ ಸುತ್ತಮುತ್ತ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು, ರಾಜ್ಯ ಮಟ್ಟದ ಸ್ಪರ್ಧೆಗೆ ಇದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತೇನೆ ಎಂದು ಅಭಿಷೇಕ್ ತಿಳಿಸಿದ್ದಾನೆ.
ಇದನ್ನೂ ಓದಿ: Hardik Pandya: ಸದ್ಯಕ್ಕಿಲ್ಲ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಕಮ್ಬ್ಯಾಕ್; ಈ ಟೂರ್ನಿಯಲ್ಲಿ ಕಣಕ್ಕೆ!
ಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕ ಮಹೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಇದ್ದರೆ ಎಂತಹದನ್ನು ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ಈ ವಿದ್ಯಾರ್ಥಿ ಅಭಿಷೇಕ್ ಸಾಕ್ಷಿಯಾಗಿದ್ದಾನೆ, ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸೋಲಾರ್ ಹುಲ್ಲು ಕಟಾವು ಯಂತ್ರ ಎಲ್ಲಾ ತೀರ್ಪುಗಾರರ, ವೀಕ್ಷಕರ ಗಮನ ಸೆಳೆದು ಪ್ರಥಮ ಸ್ಥಾನ ಗಳಿಸಿದೆ. ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಈ ಯಂತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ವಿದ್ಯಾರ್ಥಿ ಅಭಿಷೇಕ್ ಇಂಗಿತ ವ್ಯಕ್ತಪಡಿಸಿದ್ದು, ಅಗತ್ಯ ಸಲಹೆ ನೀಡುತ್ತೇನೆ ಎಂದು ತಿಳಿಸಿದರು.