Site icon Vistara News

Shivamogga News: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ: ಡಾ. ಮಹಾಂತ ಸ್ವಾಮೀಜಿ

211th Shivanubhava program at soraba

ಸೊರಬ: ಭಾರತೀಯ ಸಂಸ್ಕೃತಿಯಲ್ಲಿಯೂ (Indian culture) ಸಹ ಗುರುವಿಗೆ (Guru) ಮಹತ್ವವಾದ ಸ್ಥಾನವನ್ನು ನೀಡಲಾಗಿದೆ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.

ಸೋಮವಾರ ಪಟ್ಟಣದ ಮುರುಘಾಮಠದ ಆವರಣದಲ್ಲಿ ಶ್ರೀ ಕುಮಾರಪ್ರಭು ಮಹಾಸ್ವಾಮಿಗಳವರ ಸ್ಮಾರಕ ಸೇವಾ ಟ್ರಸ್ಟ್ ವತಿಯಿಂದ ಅಕ್ಕನ ಬಳಗ, ವೀರಶೈವ ಸಮಾಜ ಹಾಗೂ ವಿವಿಧ ಸಂಘ-ಸಂಸ್ಥೆಯ ಸಹಯೋಗದಲ್ಲಿ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡ 211ನೇ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ವ್ಯಕ್ತಿಯನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವವನೆ ಗುರುವಾಗಿದ್ದಾನೆ. ಗುರುವಿನ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಎಂಥ ಕ್ಲಿಷ್ಟಕರ ಸನ್ನಿವೇಶ ಎದುರಾದರೂ ಪಾರಾಗಬಹುದು ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಗುರುಪೂರ್ಣಿಮೆಯನ್ನು ಜಗತ್ತಿನಾದ್ಯಂತ ವಿಶೇಷವಾದ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Viral Video: ಇನ್ನೇನು ಆನೆ ತುಳಿದೇ ಬಿಟ್ಟಿತು ಎನ್ನುವಷ್ಟರಲ್ಲಿ ನಡೆಯಿತು ಪವಾಡ!

12-13ನೇ ಶತಮಾನದ ಅವಧಿಯಿಂದ ಅಜ್ಞಾತವಾಗಿದ್ದ ವಚನ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿದ ಕೀರ್ತಿ ನಿಜಶರಣ ಡಾ. ಫ.ಗು ಹಳಕಟ್ಟಿ ಅವರಿಗೆ ಸಲ್ಲುತ್ತದೆ. ವಚನ ಸಾಹಿತ್ಯವನ್ನು ಪುನಶ್ಚೇತನಕ್ಕೆ ಅವರು ನೀಡಿದ ಕೀರ್ತಿ ಮತ್ತು ಕೊಡುಗೆಯಿಂದಲೇ ಸಾಮಾನ್ಯರಿಗೂ ಸಹ ವಚನಗಳು ಲಭಿಸುವಂತಾಗಿದೆ. ಹಳಕಟ್ಟಿ ಅವರು ತೊಟ್ಟ ಪಣದ ಫಲವಾಗಿ ವಚನಗಳು ರಕ್ಷಣೆಯಾದವು. ಇದಕ್ಕಾಗಿ ಅವರು ತುಂಬಾ ಕಷ್ಟಪಟ್ಟಿದ್ದಾರೆ. ರಾಜ್ಯ ಸರ್ಕಾರ ಡಾ.ಫ.ಗು. ಹಳಕಟ್ಟಿ ಜನ್ಮ ದಿನವನ್ನು ವಚನಗಳ ದಿನವನ್ನಾಗಿ ಆಚರಿಸುವುದಾಗಿ ಘೋಷಣೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಚೇತನಕ್ಕ ಉಪನ್ಯಾಸ ನೀಡಿ, ಇಂದಿನ ಕಂಪ್ಯೂಟರ್ ಯುಗದಲ್ಲಿ ಮಕ್ಕಳಿಗೆ ಗುರುವಿನ ಮಾರ್ಗದರ್ಶನಕ್ಕಿಂತ ಗೂಗಲ್ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ. ಇದರಿಂದ ಸಂಸ್ಕಾರ ದೊರೆಯಲು ಸಾಧ್ಯವಿಲ್ಲ. ಸಕಾರಾತ್ಮಕ ಚಿಂತನೆಗಳು ಒಡಮೂಡುವ ಸತ್ಸಂಗಳಲ್ಲಿ ಮಕ್ಕಳು ಸಹ ಪಾಲ್ಗೊಳ್ಳುವಂತೆ ಪೋಷಕರು ನೋಡಿಕೊಳ್ಳಬೇಕು. ಇದರಿಂದ ಋಣಾತ್ಮಕ ಮನೋಭಾವನೆಗಳು ದೂರಸರಿದು ಧನಾತ್ಮಕ ಚಿಂತನೆಗಳು ಬೆಳೆದು ಚೈತನ್ಯ ಮೂಡಲು ಸಾಧ್ಯವಾಗುತ್ತದೆ ಎಂದರು.

ಅಕ್ಕನ ಬಳಗದ ವತಿಯಿಂದ ಶ್ರೀ ಡಾ. ಮಹಾಂತ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ನಂತರ ವಚನಗಳ ಗಾಯನಗಳನ್ನು ನಡೆಸಿಕೊಡಲಾಯಿತು.

ಇದನ್ನೂ ಓದಿ: Weather Report : ಅಂತೂ ಧರೆಗೆ ಅಪ್ಪಳಿಸಿದ ಮಳೆ; ನಾಳೆ 20 ಜಿಲ್ಲೆಗಳಲ್ಲಿ ವರ್ಷಧಾರೆ

ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಕಾರ್ಯದರ್ಶಿ ಜಯಮಾಲ ಅಣ್ಣಾಜಿ ಗೌಡ, ಮುರುಘಾಮಠದ ಕಾರ್ಯದರ್ಶಿ ಡಿ. ಶಿವಯೋಗಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕ ಅಧ್ಯಕ್ಷ ಸಿ.ಪಿ. ವೀರೇಶ್‌ಗೌಡ, ಪ್ರಮುಖರಾದ ಶಂಕರ್ ಶೇಟ್, ಚಂದ್ರಶೇಖರ ನಿಜಗುಣ, ಸುಧಾ ಶಿವಪ್ರಸಾದ್, ರಾಜು ಗೌಡ, ಅಕ್ಕನ ಬಳಗದ ಸದಸ್ಯರಾದ ಲತಾ, ಪುಷ್ಪಾ ವಿಶ್ವನಾಥ್, ಪುಷ್ಪಾ ನಾಗರಾಜ್, ಪೂರ್ಣಿಮಾ, ಶಾಂತಮ್ಮ, ಸ್ಮಿತಾ, ರೇವತಿ, ಸುಧಾ, ಅಂಬಿಕಾ ಸೇರಿದಂತೆ ಮತ್ತಿತರರು ಉಪಸ್ಥಿತರರಿದ್ದರು.

Exit mobile version