Site icon Vistara News

Shivamogga News: ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲದ ಇಂಟರ್‌ಸಿಟಿ ರೈಲು, ಓಡಾಡದ ಪ್ಯಾಸೆಂಜರ್ ರೈಲು

Arasalu railway station at Hosanagara

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಏಕೈಕ ಅರಸಾಳು ರೈಲ್ವೆ ನಿಲ್ದಾಣದಲ್ಲಿ (Railway station) ಎಕ್ಸ್‌ಪ್ರೆಸ್‌ (Express) ಮತ್ತು ಇಂಟರ್‌ಸಿಟಿ ರೈಲುಗಳ (Intercity train) ನಿಲುಗಡೆಯೇ ಇಲ್ಲದೇ ಸ್ಥಳೀಯ ರೈಲ್ವೇ ಪ್ರಯಾಣಿಕರಿಗೆ ಸಂಚರಿಸುವ ಭಾಗ್ಯ ಇನ್ನೂ ಕೂಡಿಬಂದಿಲ್ಲ.

ಮೈಸೂರು-ಬೆಂಗಳೂರು-ಶಿವಮೊಗ್ಗ-ಸಾಗರ-ತಾಳಗುಪ್ಪ ಮಾರ್ಗದ ಇಂಟರ್ ಸಿಟಿ ರೈಲು ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿಲ್ಲ. ಜತೆಗೆ ಶಿವಮೊಗ್ಗದವರಗೆ ಬಂದು ಹೋಗುವ ಪ್ಯಾಸೆಂಜರ್ ರೈಲು ಮುಂದಿನ ಹಾರನಹಳ್ಳಿ ಬಾಳೆಕೊಪ್ಪ ಕುಂಸಿ ಅರಸಾಳು ಆನಂದಪುರ ಸಾಗರ ತಾಳಗುಪ್ಪಕ್ಕೆ ಪ್ಯಾಸೆಂಜರ್ ರೈಲು ಇದ್ದು, ನಿಗದಿತ ಸಮಯಕ್ಕೆ ಬಾರದೇ ಇರುವುದರಿಂದ ಇದ್ದೂ ಇಲ್ಲದಂತಾಗಿದೆ.

ಇಂಟರ್ ಸಿಟಿ, ಎಕ್ಸ್‌ಪ್ರೆಸ್‌ ರೈಲುಗಳು ಅರಸಾಳಿನಲ್ಲಿ ನಿಲುಗಡೆ ಮಾಡಲು ಸರಿಯಾದ ಪ್ಲಾಟ್‌ಪಾರಂ ಇಲ್ಲದೇ ಇರುವುದನ್ನೇ ಕಾರಣವಾಗಿ ಮುಂದಿಟ್ಟುಕೊಂಡು ರೈಲ್ವೆ ಇಲಾಖೆಯವರು ಅರಸಾಳು ರೈಲ್ವೆ ನಿಲ್ದಾಣದಲ್ಲಿ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಅವಕಾಶ ನೀಡಿರಲಿಲ್ಲ.

ಇದನ್ನೂ ಓದಿ: ಗಿನ್ನೀಸ್ ದಾಖಲೆ ಮಾಡಲು ಹೋಗಿ 45 ನಿಮಿಷ ಕುರುಡಾದ ವ್ಯಕ್ತಿ; ಒಂದೇ ಸಮನೆ ಅಳುವ ಮುನ್ನ ಇರಲಿ ಎಚ್ಚರ!

ಆದರೆ ಸಂಸದ ಬಿ.ವೈ.ರಾಘವೇಂದ್ರ ಅವರ ಹೆಚ್ಚಿನ ಮುತುರ್ವಜಿಯಿಂದಾಗಿ ಸಾರ್ವಜನಿಕರ ಬೇಡಿಕೆಯನ್ನಾಧರಿಸಿ ಕೋಟ್ಯಂತರ ರೂ.ಯನ್ನು ಬಿಡುಗಡೆಗೊಳಿಸಿ ಅರಸಾಳು ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಪ್ಲಾಟ್‌ಫಾರಂ ಸಹ ನಿರ್ಮಿಸಲಾಗಿದ್ದು, ಮಾಲ್ಗುಡಿ ಮ್ಯೂಸಿಯಂ ಸಹ ಸ್ಥಾಪನೆಯಾಗಿ ಇದರ ಉದ್ಘಾಟನೆಯನ್ನು ಆಂದಿನ ರೈಲ್ವೆ ಸಚಿವ ಸುರೇಶ್ ಅಂಗಡಿ ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಿದ್ದರು.

ಆದರೆ ಈವರೆಗೂ ಮಲೆನಾಡ ಪ್ರದೇಶದ ರೈತಾಪಿ ವರ್ಗದವರಿಗೆ ರೈಲು ಪ್ರಯಾಣ ಮರೀಚಿಕೆಯಾಗಿದೆ.
ಡಬಲ್ ಎಂಜಿನ್ ಸರ್ಕಾರವಿದ್ದಾಗ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೀಗೆ ಎಲ್ಲರ ಗಮನ ಸೆಳೆದರೂ ಕೂಡ ಈವರೆಗೂ ರೈಲ್ವೆ ಪ್ರಯಾಣಿಕರ ಹಾಗೂ ಚುನಾಯಿತ ಪ್ರತಿನಿಧಿಗಳ ಬೇಡಿಕೆಗೆ ಸ್ಪಂದಿಸದೇ ರೈಲ್ವೆ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜನಪರ ಹೋರಾಟ ವೇದಿಕೆಯ ಅಧ್ಯಕ್ಷ ಆರ್‌.ಎನ್‌. ಮಂಜುನಾಥ ಈ ಬಗ್ಗೆ ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಯಗಢ ಭೂಕುಸಿತದಲ್ಲಿ 10 ಮಂದಿ ಸಾವು; ರಕ್ಷಣೆ ಮಾಡುತ್ತಿದ್ದ ಅಧಿಕಾರಿಗೆ ಹೃದಯ ಸ್ತಂಭನ

ಇನ್ನಾದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ತಕ್ಷಣ ಗಮನ ಹರಿಸಿ ಮಲೆನಾಡಿನ ವ್ಯಾಪ್ತಿಯ ಬಾಳೆಕೊಪ್ಪ ಹಾರನಹಳ್ಳಿ ಕುಂಸಿ ಆರಸಾಳು ಕೆಂಚನಾಲ ಆನಂದಪುರ ಮಾರ್ಗದ ಸಾಗರ ತಾಳಗುಪ್ಪಕ್ಕೆ ಪ್ಯಾಸೆಂಜರ್ ರೈಲು ಓಡಿಸಬೇಕು ಹಾಗೂ ಮೈಸೂರು – ಬೆಂಗಳೂರು ಇಂಟರ್‌ಸಿಟಿ ರೈಲು ಅರಸಾಳು ನಿಲ್ದಾಣದಲ್ಲಿ ನಿಲುಗಡೆ ಮಾಡುವ ಮೂಲಕ ಮಲೆನಾಡಿನ ಜನರ ಬೇಡಿಕೆಗೆ ಸ್ಪಂದಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Exit mobile version