ಸಾಗರ: ಮಾಜಿ ಶಾಸಕ ಹರತಾಳು ಹಾಲಪ್ಪ (Halappa Harathalu) ನನ್ನ ಜೀವ ಇರುವ ತನಕ ಗೋಪಾಲಕೃಷ್ಣ ಬೇಳೂರು ಅವರನ್ನು ವಿಧಾನಸೌಧದ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಎಂದಿದ್ದರು. ಆದರೆ, ಶಾಸಕರ ದುರಂಹಕಾರಿ ವರ್ತನೆ, ದುಡ್ಡಿನ ದರ್ಪಕ್ಕೆ ಕ್ಷೇತ್ರದ ಜನರು ತಕ್ಕಪಾಠ ಕಲಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ತಾ.ಪಂ. ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ ದೂರಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದೇ ಪದೇ ಮಾಜಿ ಶಾಸಕರು ನಮ್ಮ ನಾಯಕರನ್ನು ಏಕವಚನದಿಂದ ಕೇವಲವಾಗಿ ಮಾತನಾಡುವ ಮೂಲಕ ತಮ್ಮ ಕೆಳಮಟ್ಟದ ವ್ಯಕ್ತಿತ್ವ ಪ್ರದರ್ಶನ ಮಾಡಿದ್ದರು. ಐದು ವರ್ಷಕ್ಕೊಮ್ಮೆ ಚುನಾವಣೆ ಬರುತ್ತದೆ, ಹೋಗುತ್ತದೆ. ಆದರೆ ಮಾಜಿ ಶಾಸಕರು ತಮ್ಮ ದರ್ಪದ ನಡವಳಿಕೆಯನ್ನು ತಿದ್ದಿಕೊಳ್ಳಲಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: UPSC Result 2022: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆ
ಆನಂದಪುರಂ ಹೋಬಳಿಯ ಕೆಲವು ಸ್ವಯಂಘೋಷಿತ ಕಾಂಗ್ರೆಸ್ ನಾಯಕರು ತಮ್ಮಿಂದಲೆ ಕಾಂಗ್ರೆಸ್ ಪಕ್ಷ ಎಂಬ ಭ್ರಮೆಯಲ್ಲಿದ್ದರು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಆನಂದಪುರಂ ಹೋಬಳಿಯಲ್ಲಿ ಈ ಬಾರಿ 5 ಸಾವಿರಕ್ಕೂ ಹೆಚ್ಚು ಲೀಡ್ ಪಕ್ಷಕ್ಕೆ ಬಂದಿದೆ. ಇದರ ಹಿಂದೆ ಎಲ್ಲರ ಶ್ರಮವಿದೆ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿದ್ದವರಿಗೆ ಹೋಬಳಿ ಜನ ತಕ್ಕಪಾಠ ಕಲಿಸಿದ್ದಾರೆ. ಪಕ್ಷ ಬಿಟ್ಟು ಹೋದ ನಾಯಕರ ಜೊತೆ ಯಾರೂ ಹೋಗದೆ, ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿ ಸೌಹಾರ್ದತೆಯಿಂದ ಕೂಡಿದ ಆಡಳಿತ ನೀಡಲಾಗುತ್ತದೆ. ಸಾರ್ವಜನಿಕರು ತಮ್ಮ ಕೆಲಸಗಳಿಗೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ಶಾಸಕರನ್ನು ಭೇಟಿಯಾಗಿ ಚರ್ಚೆ ಮಾಡಬಹುದು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಎಸ್.ಲಿಂಗರಾಜ್ ಮಾತನಾಡಿ, ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ನಂತರ ಯಾರಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಇದರಿಂದ ಅಭಿವೃದ್ಧಿ ಕೆಲಸ ತೀರ ಹಿಂದೆ ಬಿದ್ದಿದೆ. ಗೋಪಾಲಕೃಷ್ಣ ಬೇಳೂರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಹಿಂದುಳಿದ ವರ್ಗಕ್ಕೆ ಸಮರ್ಥ ನಾಯಕತ್ವ ನೀಡುವ ಶಕ್ತಿ ಹೊಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪಕ್ಷವನ್ನು ಸಂಘಟಿಸಲು, ಕಾಂಗ್ರೆಸ್‍ಗೆ ಹೆಚ್ಚಿನ ಮತ ತರುವಲ್ಲಿ ಬೇಳೂರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: 2000 Notes Withdrawan : 10,000 ರೂ. ನೋಟು ಮುದ್ರಣಕ್ಕೆ ರಘುರಾಮ್ ರಾಜನ್ ನೀಡಿದ್ದ ಸಲಹೆ ಏನಾಯಿತು?
ಸುದ್ದಿಗೋಷ್ಠಿಯಲ್ಲಿ ಶೇಖರಪ್ಪ, ಮಂಜುನಾಥ್ ದಾಸನ್, ಆನಂದ್ ಹರಟೆ, ರವಿಕುಮಾರ್ ಯಡೇಹಳ್ಳಿ, ವಿಜಯಕುಮಾರ್, ಬಸವರಾಜ್, ಗಜೇಂದ್ರ, ವಿಠ್ಠಲ್ ಕೆ., ಹಾಲಪ್ಪ, ಕಿರಣ್ ದೊಡ್ಮನೆ, ರಾಕೇಶ್, ಶೇಖ್ ಅಮೀರ್, ಪ್ರಮೋದ್ ಶೇಟ್, ಸುಭಾಷ್ ಇತರರು ಹಾಜರಿದ್ದರು.