ಶಿವಮೊಗ್ಗ: ಲೈಫ್ ಇನ್ಷೂರೆನ್ಸ್ ಕಾರ್ಪೋರೇಷನ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ದ ಕೋಟ್ಯಂತರ ರೂಪಾಯಿಗಳನ್ನು ಕೇಂದ್ರ ಸರ್ಕಾರವು ಪ್ರಧಾನಿ ಮೋದಿ ಅವರ ಆಪ್ತ ಸ್ನೇಹಿತ ಅದಾನಿ ಸಮೂಹದ ಜತೆಗೆ ಹೂಡಿಕೆ ಮಾಡಿದೆ. ಈ ಮೂಲಕ ಅತ್ಯಂತ ಅಪಾಯಕಾರಿ ವಹಿವಾಟು ನಡೆಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸೋಮವಾರ (ಫೆ.೬) ಪ್ರತಿಭಟನೆ ನಡೆಸಿದೆ.
ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಐಸಿಯ 29 ಕೋಟಿ ಪಾಲಿಸಿದಾರರು ಮತ್ತು ಎಸ್‌ಬಿಐನ 45 ಕೋಟಿ ಖಾತೆದಾರರು ಕಷ್ಟದಿಂದ ಗಳಿಸಿ, ಉಳಿತಾಯ ಮಾಡಿರುವ ಹಣ ಅಪಾಯಕಾರಿಯಲ್ಲಿದೆ. ಅದಾನಿ ಗ್ರೂಪ್‌ನಲ್ಲಿ ಎಲ್ಐಸಿ ಭಾರಿ ಹೂಡಿಕೆ ಮಾಡಿದ್ದು, ಕಳೆದ ಕೆಲವು ದಿನಗಳಲ್ಲಿ ಎಲ್ಐಸಿಯ 39 ಕೋಟಿ ಪಾಲಿಸಿದಾರರು ಮತ್ತು ಹೂಡಿಕೆದಾರರು 33,060 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಅದಾನಿ ಗ್ರೂಪ್‌ಗೆ ಎಸ್‌ಬಿಐ ಮತ್ತು ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿದ್ದ ಭಾರಿ ಮೊತ್ತ ಸುಮಾರು 80 ಸಾವಿರ ಕೋಟಿ ರೂಪಾಯಿಗಳು ವಾಪಸ್ ಮಾಡದೆ ಬಾಕಿ ಉಳಿಸಿಕೊಂಡಿವೆ. ಎಲ್ಐಸಿ, ಎಸ್‌ಬಿಐ ಮತ್ತು ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಕೆಲವು ಆಯ್ದ ಬಿಲೇನಿಯರ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಬಲವಂತವಾಗಿ ಹೂಡಿಕೆ ಮಾಡಿಸಿದೆ. ಎಲ್ಐಸಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ತಕ್ಷಣವೇ ಸ್ಥಗಿತಗೊಳಿಸಬೇಕು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನ ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.