ಶಿವಮೊಗ್ಗ: ಸಾರ್ಥಕ 77 ವರ್ಷ ಪೂರೈಸಿರುವ ಎನ್‌ಇಎಸ್ ಸಂಸ್ಥೆಯ ಅಮೃತ ಮಹೋತ್ಸವದ (Amrita mahotsava) ಸಮಾರಂಭ ಜೂ.20 ಮತ್ತು 21 ರಂದು ನಡೆಯಲಿದೆ ಎಂದು ಎನ್‌ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎನ್‌ಇಎಸ್ ಸಮೂಹದ ವಿದ್ಯಾರ್ಥಿ ಮತ್ತು ಸಿಬ್ಬಂದಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜೂ.17ರಂದು ಅಮೃತ ನಡಿಗೆ ನಡೆಯಲಿದೆ. ಎರಡೂವರೆ ಕೋಟಿ ವೆಚ್ಚದಲ್ಲಿ ಕೋಣಂದೂರಿನಲ್ಲಿ ಹೊಸ ವಿನ್ಯಾಸದ ಕಟ್ಟಡ ಜೂ. 26 ರಂದು ಉದ್ಘಾಟನೆ ಆಗಲಿದೆ ಎಂದು ಹೇಳಿದರು.
ಇದನ್ನೂ ಓದಿ: Theft Case: ಪ್ರಯಾಣಿಕರ ಹಣ ಕದ್ದ ಕಳ್ಳನ ಬೆನ್ನಟ್ಟಿದ ಕೆಎಸ್‌ಆರ್‌ಟಿಸಿ ಡ್ರೈವರ್-ಕಂಡಕ್ಟರ್
ಎನ್ ಇಎಸ್ ಮೈದಾನದಲ್ಲಿ ಜೂ.20 ರಂದು ಬೆಳಗ್ಗೆ 10ಕ್ಕೆ ನಡೆಯುವ ಹಬ್ಬದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಗಂಗಾವತಿ ಪ್ರಾಣೇಶರ ಜೀವನವೇ ಹಾಸ್ಯ ಎಂಬ ವಿಷಯದ ಕುರಿತು ಹಾಸ್ಯ ಲಹರಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಶಾಸಕ ಚನ್ನಬಸಪ್ಪ (ಚೆನ್ನಿ) ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ನಟ ವಶಿಷ್ಠ ಸಿಂಹ ಅವರು ವಿಶೇಷ ಆಹ್ವಾನಿತರಾಗಿರುತ್ತಾರೆ. ಈ ಸಂದರ್ಭ ರಾತ್ರಿ 9 ರವರೆಗೆ ಸಾಂಸ್ಕೃತಿಕ ವೈಭವ ಜರುಗಲಿದ್ದು, ನೃತ್ಯ, ಸಂಗೀತ, ಜಾನಪದ, ನಾಟಕ, ಮಿಮಿಕ್ರಿ, ಗಮಕ, ಮ್ಯಾಜಿಕ್ ಷೋ ಮತ್ತಿತರ ಸೃಜನಶೀಲ ಪ್ರತಿಭಾ ಪ್ರದರ್ಶನ ಇರಲಿದೆ.
ಜೂ.21 ರಂದು ಬೆಳಗ್ಗೆ 9.30 ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಸಮಾರೋಪ ಭಾಷಣ ನೆರವೇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸಿ ಆರ್ ನಾಗರಾಜ್, ಕಾರ್ಯದರ್ಶಿ ಎಸ್ ಎನ್ ನಾಗರಾಜ್, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ, ಖಜಾಂಚಿ ಡಿ ಜಿ ರಮೇಶ್, ಕುಲಸಚಿವ ಹರಿಯಪ್ಪ, ಆಡಳಿತಾಧಿಕಾರಿ ಅಡ್ಡಮನೆ ರಾಮಚಂದ್ರ ಮತ್ತಿತರರು ಇದ್ದರು.