Site icon Vistara News

Shivamogga News: ಮಳೆ ಸಂತ್ರಸ್ತರಿಗೆ ಶೀಘ್ರ ಸ್ಪಂದಿಸಿ, ಕ್ರಮ ವಹಿಸಿ: ಸಚಿವ ಮಧು ಬಂಗಾರಪ್ಪ ಸೂಚನೆ

Shivamogga District In-charge Minister S Madhu Bangarappa Latest Meeting

ಶಿವಮೊಗ್ಗ: ಪ್ರಸಕ್ತ ವಾರದಲ್ಲಿ ಜಿಲ್ಲೆಯಲ್ಲಿ ಮಳೆ (Rain) ತೀವ್ರತೆ ಹೆಚ್ಚಿದ್ದು, ಅಧಿಕಾರಿಗಳು (Officers) ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ (Victims) ಶೀಘ್ರವಾಗಿ ಮತ್ತು ಉದಾರವಾಗಿ ಸ್ಪಂದಿಸಿ, ನಿಯಮಾನುಸಾರ ಪರಿಹಾರಗಳನ್ನು ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಪ್ರಕೃತಿ ವಿಕೋಪ ಮತ್ತು ಅಡಿಕೆ ಬೆಳೆಯ ಎಲೆಚುಕ್ಕಿ ರೋಗದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ (education news) ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಬಾರಿ ಸ್ವಲ್ಪ ತಡವಾಗಿ ಮಳೆ ಆರಂಭವಾಗಿದೆ. ಅಂತಹ ಪ್ರಾಕೃತಿಕ ಹಾನಿಯಾಗಿಲ್ಲ. ಮಲೆನಾಡು ಭಾಗದಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿ, ಕೆಲವೆಡೆ ರಸ್ತೆ, ಸೇತುವೆ, ಬೆಳೆ ಹಾನಿ ಹೀಗೆ ಕೆಲವೆಡೆ ಮೂಲಭೂತ ಸೌಕರ್ಯಗಳಿಗೆ ಹಾನಿ ಸಂಭವಿಸಿದ್ದು ಅಧಿಕಾರಿಗಳು ತಮ್ಮ ಕಾರ್ಯಸ್ಥಾನದಲ್ಲಿ ಎಚ್ಚರಿಕೆಯಿಂದಿದ್ದು ಶೀಘ್ರವಾಗಿ ಕ್ರಮ ಕೈಗೊಂಡು ಪರಿಹಾರ ಒದಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: Byju Raveendran : ಹೂಡಿಕೆದಾರರ ಎದುರು ಕಣ್ಣೀರಿಟ್ಟ ಬೈಜೂಸ್‌ ರವೀಂದ್ರನ್

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, 2023 ರ ಮಾರ್ಚ್ 1 ರಿಂದ ಮೇ 31 ರವರೆಗೆ ಜಿಲ್ಲೆಯಲ್ಲಿ 82 ಮಿ.ಮೀ ಮಳೆಯಾಗಿದೆ. ವಾಡಿಕೆ ಮಳೆ 127 ಮಿಮೀ ಇದ್ದು ಶೇ.36 ಮಳೆ ಕೊರತೆ ಕಂಡು ಬಂದಿದೆ. ಜೂನ್ ಮಾಹೆಯಲ್ಲಿ 472 ಮಿ.ಮೀ ವಾಡಿಕೆಗೆ 120 ಮಿ.ಮೀ ವಾಸ್ತವವಾಗಿ ಮಳೆಯಾಗಿದ್ದು ಶೇ.75 ಮಳೆ ಕೊರತೆ ಕಂಡುಬಂದಿದೆ. ಕಳೆದ 24 ಗಂಟೆಯಲ್ಲಿ 22.3 ಮಿ.ಮೀ ವಾಡಿಕೆಗೆ 58.4 ಮಿ.ಮೀ ಮಳೆಯಾಗಿದ್ದು ಜಿಲ್ಲೆಯಲ್ಲಿ ಸರಾಸರಿ 162 ಮಿ.ಮೀ ಮಳೆಯಾಗಿದೆ.

ಜನವರಿಯಿಂದ ಇಲ್ಲಿಯವರೆಗೆ 1223.5 ಮಿ.ಮೀ ವಾಡಿಕೆ ಮಳೆಗೆ 949.5 ಮಿ.ಮೀ ವಾಸ್ತವ ಮಳೆಯಾಗಿದ್ದು, ಶೇ.22 ಮಳೆ ಕೊರತೆಯಾಗಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಟ ಮಟ್ಟ 1819 ಅಡಿಯಿದ್ದು, ಕಳೆದ ವರ್ಷ 1798.1 ಅಡಿ ಭರ್ತಿಯಾಗಿದ್ದು ಹಾಲಿ 1778.9 ಅಡಿ ಭರ್ತಿಯಾಗಿದೆ. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಕಳೆದ ವರ್ಷ ಈ ವೇಳೆಗೆ 181.95 ಅಡಿ ಭರ್ತಿಯಾಗಿತ್ತು. ಹಾಲಿ 152.9 ಅಡಿ ನೀರಿದೆ ಎಂದರು.

ಜೂ.1ರಿಂದ ಜು.25 ರ ವರೆಗೆ ಜಿಲ್ಲೆಯಲ್ಲಿ 188 ಮನೆ ಭಾಗಶಃ ಹಾನಿ, 8 ತೀವ್ರ, 10 ಪೂರ್ಣ ಹಾನಿಯಾಗಿದ್ದು ಒಟ್ಟು 206 ಮನೆ ಹಾನಿ ಮತ್ತು 34 ಕೊಟ್ಟಿಗೆ ಮನೆ ಹಾನಿಯಾಗಿದ್ದು, ಸರ್ಕಾರದ ನಿಯಮಾನುಸಾರ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: UGC NET results: ಯುಜಿಸಿ ನೆಟ್‌ ಫಲಿತಾಂಶ 2023 ಪ್ರಕಟ; ನಿಮ್ಮ ರಿಸಲ್ಟ್‌ ಹೀಗೆ ಚೆಕ್‌ ಮಾಡಿ

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಸಾಗರ ತಾಲೂಕಿನಲ್ಲಿ 500 ಹೆಕ್ಟೇರ್ ಬೆಳೆ ಹಾಗೂ ಸೊರಬದಲ್ಲಿ 315 ಹೆಕ್ಟೇರ್‌ ಬೆಳೆ ಜಲಾವೃತವಾಗಿದೆ. ಪರಿಹಾರಕ್ಕೆ ಕ್ರಮ ವಹಿಸಲಾಗಿದೆ. ಬಿತ್ತನೆ ಬೀಜದ ಕೊರತೆ ಇಲ್ಲ. 15500 ರೈತರು ಬೆಳೆ ವಿಮೆ ಮಾಡಿಸಿದ್ದು, ಇದೇ ಜುಲೈ 31 ರವರೆಗೆ ನೋಂದಣಿಗೆ ಸಮಯಾವಾಕಾಶ ಇದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಜಿಲ್ಲೆಯಲ್ಲಿ 30.52 ಹೆಕ್ಟೇರ್ ಬಾಳೆ, ಶುಂಠಿ ಹಾನಿಗೊಳಗಾಗಿದೆ ಎಂದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಳೆ ಪರಿಹಾರ ಕುರಿತಾದ ಮಾರ್ಗಸೂಚಿ ಬಂದಿಲ್ಲದ ಕಾರಣ ಪರಿಹಾರ ತಡವಾಗುತ್ತಿದೆ. ಸಂತ್ರಸ್ತರಿಗೆ ವಿಳಂಬ ಮಾಡದೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದರು.

ಕಳೆದ ಸಾಲಿನಲ್ಲಿ ಎಲೆಚುಕ್ಕಿ ರೋಗ ನಿಯಂತ್ರಣ ಕುರಿತಾದ ಸಂಶೋಧನೆಗೆ ರೂ. 10 ಕೋಟಿ ಅನುದಾನ ಇರಿಸಲಾಗಿದ್ದು ಈ ಬಾರಿ ಕೈಬಿಡಲಾಗಿದೆ. ಎಲೆಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯದೆ ಹೋದರೆ ಹಾಗೂ ಔಷಧಿ ಸಿಂಪಡಿಸಲು ಕ್ರಮ ವಹಿಸದಿದ್ದರೆ ಅಡಿಕೆ ತೋಟಕ್ಕೆ ತೋಟವೇ ನಾಶವಾಗುತ್ತದೆ. ಆದ್ದರಿಂದ ಕೃಷಿ ಮತ್ತು ತೋಟಗಾರಿಕೆ ಕಾಲೇಜಿನಲ್ಲಿ ಸಂಶೋಧನೆಗೆ ಅವಕಾಶ ಮಾಡಿಕೊಡಬೇಕು ಎಂದರು.

ಇದನ್ನೂ ಓದಿ: Rain News : ಮಳೆಗೆ 212ಕ್ಕೂ ಹೆಚ್ಚು ಗ್ರಾಮಗಳ ಕರೆಂಟ್‌ ಕಟ್‌; ರೈಲು ಸಂಚಾರ ಸ್ಥಗಿತ

ಸಚಿವರು ಪ್ರತಿಕ್ರಿಯಿಸಿ ಈ ಬಗ್ಗೆ ತಾವೇ ಅನುಸರಣೆ ಕೈಗೊಳ್ಳುವುದಾಗಿ ತಿಳಿಸಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಲೆಚುಕ್ಕಿ ನಿಯಂತ್ರಣ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಶಿಥಿಲಾವಸ್ಥೆಯಲ್ಲಿರುವ ಶಾಲೆ ಕೆಡವಲು ವಿಳಂಬ ಧೋರಣೆ ತೋರುತ್ತಿರುವ ಇಲಾಖೆಗಳ ಕುರಿತು ಸಭೆಯ ಗಮನಕ್ಕೆ ತಂದರು. ತೀರ್ಥಹಳ್ಳಿ ತಾಲೂಕಿನ ಮೂಗುಡ್ತಿ ಬಳಿ ಜೀರಿಗೆಮನೆಯ ಸರ್ಕಾರಿ ಶಾಲಾ ಆವರಣದಲ್ಲಿರುವ ಹಳೆಯ ಅಕೇಶಿಯಾ ಮರಗಳು ಶಾಲಾ ಕಟ್ಟಡದ ಮೇಲೆ ಬೀಳುವ ಸಂಭವದ ಹಿನ್ನೆಲೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಮರ ಕಟಾವಿಗೆ ಇದುವರೆಗೆ ಅನುಮತಿ ನೀಡುತ್ತಿಲ್ಲ. ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಶೀಘ್ರವಾಗಿ ಮರ ಕಡಿಸಬೇಕೆಂದು ಆಗ್ರಹಿಸಿದರು.

ಮಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಅಕೇಶಿಯಾ, ಇತರೆ ಮರಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳು ಹಾನಿಯಾಗಿ ಕರೆಂಟ್ ಇಲ್ಲದೆ ತೊಂದರೆ ಅನುಭವಿಸುತ್ತೇವೆ. ಆದ್ದರಿಂದ ಮೆಸ್ಕಾಂ ಮತ್ತು ಅರಣ್ಯ ಇಲಾಖೆಯವರು ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದರು.

ಇದನ್ನೂ ಓದಿ: IND vs WI ODI: ಭಾರತ-ವಿಂಡೀಸ್​ ಏಕದಿನ ಪಂದ್ಯದ ಪಿಚ್​ ರಿಪೋರ್ಟ್​,ಹವಾಮಾನ ವರದಿ, ಸಂಭಾವ್ಯ ತಂಡ

ಸಚಿವರು ಪ್ರತಿಕ್ರಿಯಿಸಿ, ಹಳೆಯ ಶಾಲೆ ಕೆಡುವುದು ಮತ್ತು ಮರಗಳನ್ನು ಕಟಾವು ಮಾಡುವುದು ಅತಿ ಮುಖ್ಯ. ಇದು ತುಂಬಾ ಗಂಭೀರ ವಿಚಾರವಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶೀಘ್ರ ಕ್ರಮ ಕೈಗೊಳ್ಳಬೇಕು. ಡಿಡಿಪಿಐ ಅವರು ಶಿಥಿಲಾವಸ್ಥೆಯಲ್ಲಿರುವ ಶಾಲೆ ಕೆಡವಲು ಕ್ರಮ ಕೈಗೊಳ್ಳಬೇಕು. ಹಾಗೂ ಈ ಕುರಿತು ಪಿಡಬ್ಲ್ಯುಡಿ ಮತ್ತು ಪಿಆರ್‍ಇಡಿ ಯವರು ಶುಕ್ರವಾರದೊಳಗೆ ವರದಿ ನೀಡುವಂತೆ ಸೂಚಿಸಿದರು.

ಡಿಡಿಪಿಐ ಅವರು ಪ್ರತಿಕ್ರಿಯಿಸಿ, 24 ಶಾಲೆಗಳನ್ನು ಕೆಡವಲು ಪಿಡಬ್ಲ್ಯುಡಿ ಅನುಮೋದನೆ ನೀಡಿದೆ. ಇನ್ನೂ 423 ಶಾಲೆಗಳ ದೃಢೀಕರಣ ಆಗಬೇಕಿದೆ ಎಂದರು.

ಶಾಸಕಿ ಶಾರದಾ ಪೂರ್ಯನಾಯ್ಕ ಮಾತನಾಡಿ ಭದ್ರಾವತಿ ತಾಲೂಕು ಮತ್ತು ಇತರೆಡೆ ಚಾನಲ್‌ಗಳಲ್ಲಿ ತುಂಬಿರುವ ಹೂಳು ತೆಗಿಸಲು ಹಾಗೂ ನಿರ್ವಹಣೆ ಕೈಗೊಳ್ಳಲು ಬೇಸಿಗೆಯಲ್ಲಿ ಯೋಜನೆ ರೂಪಿಸಿಕೊಳ್ಳಬೇಕು ಎಂದರು.

ಭದ್ರಾ ಪ್ರಾಜೆಕ್ಟ್ ಅಧಿಕಾರಿ ಮಾತನಾಡಿ. ಪ್ರಸ್ತುತ ಜಲಾಶಯದಲ್ಲಿ 152.9 ಅಡಿ ನೀಡಿದ್ದು, 162 ಅಡಿ ಬಂದ ಮೇಲೆ ಕಾಲುವೆಗಳಿಗೆ ನೀರು ಹರಿಸಲು ಕ್ರಮ ವಹಿಸಲಾಗುವುದು. ಭದ್ರಾ ಜಲಾಶಯ ಒಂದೆಡೆ ಬಿದಿರು ಬೆಳೆದು ನೀರು ಲೀಕೇಜ್ ಆಗುತ್ತಿದ್ದು, 10 ರಿಂದ 12 ಟಿಎಂಸಿ ನೀರು ವ್ಯರ್ಥವಾಗುತ್ತದೆ. ಅರಣ್ಯ ಇಲಾಖೆಯವರು ಇದನ್ನು ಸರಿಪಡಿಸಬೇಕು. ಬಿದಿರು ಕಡಿದು ಲೀಕೇಜ್ ಸರಿಪಡಿಸದಿದ್ದರೆ ಜಲಾಶಯಕ್ಕೆ ಸಮಸ್ಯೆಯಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್‍ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಮಳೆಹಾನಿ ಪ್ರದೇಶಗಳ ವೀಕ್ಷಣೆ

ಸಭೆಯ ನಂತರ ಸಚಿವರು ಶಿವಮೊಗ್ಗದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಹೊಸಮನೆ ರಾಜಾಕಾಲುವೆ ಕಾಮಗಾರಿ, ದುರ್ಗಿಗುಡಿ ಸವಾರ್‍ಲೈನ್ ರಸ್ತೆಯಲ್ಲಿ ಮಳೆಯಿಂದ ಕುಸಿದು ಬಿದ್ದ ಮನೆಗೆ ಭೇಟಿ ನೀಡಿದರು.

ಇದನ್ನೂ ಓದಿ: MS Dhoni : ಧೋನಿಯ ಹಳೆಯ ಜಾಬ್ ಆಫರ್ ಲೆಟರ್ ವೈರಲ್; ಸಂಬಳ ನೋಡಿ ಅಭಿಮಾನಿಗಳಿಗೆ ಅಚ್ಚರಿ!

ರಿಪ್ಪನ್‍ಪೇಟೆಯ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ, ರಿಪ್ಪನ್‍ಪೇಟೆ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿದರು. ಈ ವೇಳೆ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಡಿಸಿ, ಎಸ್ಪಿ, ಸಿಇಓ, ಎಸಿ ಇತರೆ ಅಧಿಕಾರಿಗಳು ಹಾಜರಿದ್ದರು.

ರಾಜ್ಯದಲ್ಲಿ 2500 ರಿಂದ 3000 ಶಾಲೆಗಳಲ್ಲಿ ಕೇವಲ 10 ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ 300 ಶಾಲೆಗಳಲ್ಲಿ ಸೊನ್ನೆ ಶಿಕ್ಷಕರಿದ್ದಾರೆ. ಇದೀಗ ಶಿಕ್ಷಕರ ಕೊರತೆ ನೀಗಿಸಲಾಗುತ್ತಿದೆ. 15 ಸಾವಿರ ಶಿಕ್ಷಕರು ಬರುತ್ತಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿ ಕಡಿಮೆ ವಿದ್ಯಾರ್ಥಿಗಳು ಇದ್ದಾರೆ. 4-5 ಕಿ.ಮೀ ಅಥವಾ ಕಡಿಮೆ ಅಂತರದಲ್ಲಿ ಅತಿ ಕಡಿಮೆ ಅಂದರೆ 3 ರಿಂದ 4 ಮತ್ತು 8-10 ವಿದ್ಯಾರ್ಥಿಗಳಿರುವ ಶಾಲೆಗಳನ್ನು ಒಂದೆಡೆ ಸೇರಿಸಿ ಶಾಲೆ ನಡೆಸಿದರೆ ಅತ್ಯಂತ ಉಪಯುಕ್ತವಾಗುತ್ತದೆ. ಈ ಕುರಿತು ಡಿ ಡಿ ಪಿ ಐ, ಬಿಇಓ ರವರು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ, ಪಟ್ಟಿಮಾಡಿ ವರದಿ ನೀಡಬೇಕು. ಈ ರೀತಿಯ 4-5 ಶಾಲೆಗಳನ್ನು ಒಂದೇ ಕಡೆ ಸುಸಜ್ಜಿತವಾದ ಶಾಲೆ ವ್ಯವಸ್ಥೆ ಮಾಡಿದಲ್ಲಿ ಮಕ್ಕಳಿಗೂ ಉತ್ತಮ ಶಾಲಾ ವಾತಾವರಣ ಲಭ್ಯವಾಗುತ್ತದೆ. ಈ ರೀತಿಯ ಶಾಲೆಗೆ ತೆರಳಲು ಮಕ್ಕಳಿಗೆ ಸರ್ಕಾರದ ವತಿಯಿಂದ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗುವುದು.

-ಎಸ್.ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು.

Exit mobile version