Site icon Vistara News

Shivamogga News: ಕ್ಷೇತ್ರದ ರೈಲ್ವೆ ಯೋಜನೆಗಳ ಕುರಿತು ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಸಭೆ

Shivamogga Progress review meeting led by MP B. Y. Raghavendra on railway projects

ಶಿವಮೊಗ್ಗ: ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ರೈಲ್ವೆ ಯೋಜನೆಗಳ (Railway projects) ಕುರಿತು ಸಂಸದ ಬಿ.ವೈ.ರಾಘವೇಂದ್ರ, ಅವರು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆಯ ಮಹಾಪ್ರಬಂಧಕ ಸಂಜೀವ್ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಕೇಂದ್ರ ಸರ್ಕಾರ 2023-24ರ ಬಜೆಟ್ ನಲ್ಲಿ ಘೋಷಿಸಿದ ‘ಅಮೃತ್ ಭಾರತ್ ಯೋಜನೆಯಡಿ 22.5 ಕೋಟಿ ರೂ ವೆಚ್ಚದಲ್ಲಿ ತಾಳಗುಪ್ಪ ರೈಲ್ವೆ ನಿಲ್ದಾಣವನ್ನು, 19.28 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣವನ್ನು ಮತ್ತು 21.10 ಕೋಟಿ ರೂ. ವೆಚ್ಚದಲ್ಲಿ ಸಾಗರ ರೈಲ್ವೆ ನಿಲ್ದಾಣವನ್ನು ಹಾಗೂ 33.00 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಗೂಡ್ಸ್ ಯಾರ್ಡನ್ನು ಅಭಿವೃದ್ಧಿಪಡಿಸಲು ಕೇಂದ್ರ ರೈಲ್ವೆ ಇಲಾಖೆ ಅನುದಾನ ಒದಗಿಸಿದೆ.

ಈ ಕುರಿತು ಸಂಸದ ಬಿ.ವೈ.ರಾಘವೇಂದ್ರ ಅವರು, ತಾಳಗುಪ್ಪ, ಶಿವಮೊಗ್ಗ ನಗರ, ಸಾಗರ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದರು, ಇದಕ್ಕೆ ಕೇಂದ್ರ ರೈಲ್ವೆ ಇಲಾಖೆ ಒಪ್ಪಿಗೆ ನೀಡಿ, ಅನುದಾನ ಒದಗಿಸಿದೆ.

ಇದನ್ನೂ ಓದಿ: IPL 2023: ಗೆಳೆಯ ಕೊಹ್ಲಿಗೆ ಖಡಕ್ ಎಚ್ಚರಿಕೆ ನೀಡಿದ ‘ಯುನಿವರ್ಸ್​ ಬಾಸ್’​ ಗೇಲ್​; ಏನದು?

ಪ್ರಯಾಣಿಕ ಸ್ನೇಹಿ ಸವಲತ್ತು ಯೋಜನೆ ಮಂಜೂರಾತಿ

ಇನ್ನು ಪ್ರಯಾಣಿಕ ಸ್ನೇಹಿ ಸವಲತ್ತುಗಳನ್ನು (ಗ್ರಾನೇಟ್ ನೆಲಹಾಸಿನ ಪ್ಲಾಟ್ ಫಾರಂ, ಡಿಜಿಟಲ್ ಸಿಗ್ನಲ್ಸ್, ಪ್ಲಾಟ್ ಫಾರಂ ಶೆಲ್ಪರ್, ಪಾರ್ಕಿಂಗ್ ಜಾಗದಲ್ಲಿ ಶೆಡ್ ನಿರ್ಮಾಣ, ಕಾಂಪೌಂಡ್ ವಾಲ್ ನಿರ್ಮಾಣ, ಸರ್ಕುಲೇಟಿಂಗ್ ಏರಿಯಾ ಅಭಿವೃದ್ಧಿ, ಸ್ಪೇಷನ್ ನಿಲ್ದಾಣದ ಸೌಂದರೀಕರಣ, ನಿಲ್ದಾಣದ ಮುಂಭಾಗದ ಉದ್ಯಾವನ, ಫೂಟ್ ಓವರ್ ಬ್ರಿಡ್, ಆಧುನಿಕ ಶೌಚಾಲಯಗಳು, ಉತ್ತಮ ಗುಣಮಟ್ಟದ ವಿದ್ಯುತ್ ಬೆಳಕಿನ ವ್ಯವಸ್ಥೆ, ಸಿ.ಸಿ.ಟಿ.ವಿ. ರೈಲ್ವೆ ಉದ್ಘೋಷಣಾ ವ್ಯವಸ್ಥೆ ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸುವ ಯೋಜನೆಯು ಮಂಜೂರಾತಿಗೊಂಡಿದೆ.

ಜತೆಗೆ ಶಿವಮೊಗ್ಗ ಗೂಡ್ಸ್ ಯಾರ್ಡ್‌ನಲ್ಲಿ ಅಗತ್ಯ ಮೂಲ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರ, ಪಡಿತರ ಧಾನ್ಯ, ಸಿಮೆಂಟ್, ಕಬ್ಬಿಣ ಮತ್ತಿತರ ಅಗತ್ಯ ವಸ್ತುಗಳನ್ನು ಶೀಘ್ರವಾಗಿ ಲಭ್ಯವಾಗುವಂತೆ ಮಾಡಲು ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ರೈಲ್ವೆ ಉನ್ನತಾಧಿಕಾರಿಗಳು ತಿಳಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣ

2019-20 ರ ಕೇಂದ್ರ ಮುಂಗಡ ಪತ್ರದಲ್ಲಿ ಮಲೆನಾಡಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಸೇತುವೆಯಾಗುವ 1,200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಂಜೂರಾಗಿರುವ ಶಿವಮೊಗ್ಗ ಶಿಕಾರಿಪುರ ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ಯೋಜನೆಯ ಮೊದಲನೇ ಹಂತವಾದ ಶಿವಮೊಗ್ಗ-ಶಿಕಾರಿಪುರ (46 ಕಿ.ಮೀ) ನಡುವಿನ ಕಾಮಗಾರಿಗೆ ಅಗತ್ಯವಿರುವ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆದಾರರನ್ನು ಸಹ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: UPSC Result 2022 : ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಇಶಿತಾ ಕಿಶೋರ್‌ ಟಾಪರ್

ಈ ಯೋಜನೆಯ ಕಾಮಗಾರಿಯ ಪೂರ್ವ ಸಿದ್ಧತೆಗಳು ಆರಂಭಗೊಂಡಿದ್ದು, ಮುಂದಿನ ವಾರದಿಂದ ಕಾಮಗಾರಿಯನ್ನು ಪ್ರಾರಂಭಿಸಿ 2025 ರ ಡಿಸೆಂಬರ್ ವೇಳೆಗೆ ಶಿವಮೊಗ್ಗ-ಶಿಕಾರಿಪುರ ನಡುವಿನ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದರು.

ತಾಳಗುಪ್ಪ – ತಡಸ – ಹೊನ್ನಾವರ – ಶಿರಸಿ – ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗ ಯೋಜನೆಯ ಸರ್ವೆ ಕಾಮಗಾರಿ ಪೂರ್ಣಗೊಂಡಿದ್ದು, ನೈರುತ್ಯ ರೈಲ್ವೆಯು ಸರ್ವೆ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ. ಈ ಯೋಜನೆ ಮಂಜೂರು ಮಾಡಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‍ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಈಗಾಗಲೇ ಕೋರಿದ್ದು, ನೈರುತ್ಯ ರೈಲ್ವೆಯಿಂದಲು ಸಹ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಯಿತು.

ಇದೇ ವೇಳೆ ಅರಸಾಳು ಮತ್ತು ಹಾರನಹಳ್ಳಿಯಲ್ಲಿ ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಯನ್ನು ಮಾಡಲು ಸಂಸದರು ಒತ್ತಾಯಿಸಿದರು. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: Narendra Modi: ಆಸ್ಟ್ರೇಲಿಯಾದಲ್ಲಿ ಮೋದಿ ಮೋಡಿ, ಬ್ರಿಸ್ಬೇನ್‌ನಲ್ಲಿ ಶೀಘ್ರವೇ ಕಾನ್ಸುಲೇಟ್‌ ಸ್ಥಾಪನೆ ಘೋಷಣೆ

ವಂದೇ ಭಾರತ ರೈಲು ಸೇವೆ ಆರಂಭಕ್ಕೆ ಒತ್ತಾಯ

ಬೆಂಗಳೂರು ಹಾಗೂ ಶಿವಮೊಗ್ಗ ನಗರಗಳ ನಡುವೆ ವಂದೇ ಭಾರತ ರೈಲು ಸೇವೆಯನ್ನು ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಸಂಸದರು ಒತ್ತಾಯಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಅಧಿಕಾರಿಗಳು, ಈ ಬಗ್ಗೆ ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನು ಅನೇಕ ರೈಲ್ವೇ ಯೋಜನೆ ಹಾಗೂ ಸೌಕರ್ಯಗಳ ಕುರಿತು ಚರ್ಚಿಸಲಾಯಿತು.

Exit mobile version