Site icon Vistara News

Shivamogga News: ಹೊಂಬುಜ ಜೈನಮಠದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ

Shivamogga News Special Puja of Shravan month at Hombuja Jain Math

ರಿಪ್ಪನ್‌ಪೇಟೆ: ದಕ್ಷಿಣ ಭಾರತದ (South India) ಜೈನರ (Jains) ಪವಿತ್ರ ಯಾತ್ರಾ ಸ್ಥಳವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಂಬುಜ ಅತಿಶಯ ಮಹಾಕ್ಷೇತ್ರದ ಹೊಂಬುಜ ಮಠದಲ್ಲಿ (Hombuja Jain Math) ಶುಕ್ರವಾರ ಶ್ರಾವಣ ಮಾಸದ ಚತುರ್ಥ ಸಂಪತ್ ಶುಕ್ರವಾರದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಹೊಂಬುಜ ಶ್ರೀಕ್ಷೇತ್ರದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಪ್ರಾಚೀನ ಜೈನಧರ್ಮ ಭಾರತ ದೇಶದಲ್ಲಿ ಅಹಿಂಸಾತ್ಮಕ ಸಾಮರಸ್ಯ ಜೀವನ ಮೌಲ್ಯವನ್ನು ಪ್ರತಿಪಾದಿಸಿದೆ ಎಂದು ಹೇಳಿದರು.

ಸರ್ವರಲ್ಲಿಯೂ ಧಾರ್ಮಿಕ ಶ್ರದ್ಧೆ-ಭಕ್ತಿಯ ಆಸ್ತಿಕ ಭಾವ ವರ್ಧಿಸಬೇಕು. ಹೊಂಬುಜ ಶ್ರೀಕ್ಷೇತ್ರದ ಜಗನ್ಮಾತೆ ಯಕ್ಷಿ ಪದ್ಮಾವತಿ ದೇವಿಯ ಅನುಗ್ರಹದಿಂದ ಭಕ್ತವೃಂದದವರ ಜೀವನ ಐಸಿರಿ ಆಗಲೆಂದು ಶ್ರೀಗಳು ಶುಭಾಶೀರ್ವಾದ ಮಾಡಿದರು.

ಇದನ್ನೂ ಓದಿ: Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಲಕ್ಷಾಂತರ ಭಕ್ತರು

ಶ್ರಾವಣ ಮಾಸದ ಚತುರ್ಥ ಸಂಪತ್ ಶುಕ್ರವಾರ ಕೃಷ್ಣಪಕ್ಷದ ನವಮಿಯಂದು ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಅಭೀಷ್ಠವರ ಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಇಷ್ಟಾರ್ಥನೆರವೇರಲು ಭಕ್ತರು ಶ್ರದ್ಧಾ ಪೂರ್ವಕ ಪ್ರಾರ್ಥನೆ ಸಲ್ಲಿಸಿದರು. ಸೀರೆ-ಉಡಿ-ಫಲ-ಪುಷ್ಪ-ಧಾನ್ಯಗಳಿಂದ ಹರಕೆ ಪೂಜೆ ಸಮರ್ಪಿಸಿದರು.

ಇದೇ ಸಂದರ್ಭದಲ್ಲಿ ಶಿರಹಟ್ಟಿಯ ಜೈನ ಧರ್ಮೀಯ 100 ಜನ ಭಕ್ತವೃಂದದವರು 450 ಕಿ.ಮೀ. ಪಾದಾಯಾತ್ರೆಯಲ್ಲಿ ಆಗಮಿಸಿ ಪೂಜಾ ಮತ್ತು ಭೋಜನ ಸೇವೆ ಸಲ್ಲಿಸಿದರು.

ಹಾವೇರಿ ಜಿಲ್ಲೆಯ ದುಂಡಶಿ ಗ್ರಾಮದ ದಿಗಂಬರ ಜೈನ ಸಮಾಜದ 50 ಜನ ಭಕ್ತ ಸಮೂಹ ಪಾದಯಾತ್ರೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದರು.

ನವಧಾನ್ಯ, ಸಿರಿಧಾನ್ಯಗಳಿಂದ ಫಲ-ಪುಷ್ಪಗಳ 108 ವಿಧಗಳಲ್ಲಿ ಶ್ರೀ ಪದ್ಮಾವತಿ ದೇವಿ ಸಾನಿಧ್ಯದಲ್ಲಿ ಭಕ್ತರು ಕಾಣಿಕೆಗಳನ್ನು ಅರ್ಪಿಸಿದರು.

ಇದನ್ನೂ ಓದಿ: Success Story: ತಗಡಿನ ಮನೆಯಿಂದ ಅರಮನೆವರೆಗೆ; ಅಧಿಕಾರಿಯ 2 ಮನೆ ಹೇಳುತ್ತಿವೆ ಶ್ರಮದ ಕತೆಗಳು…

ಶ್ರೀ ಪದ್ಮಾವತಿ ದೇವಿಯ ಅಷ್ಟವಿಧಾರ್ಚನೆ ಪೂಜೆಯ ಬಳಿಕ ಭಕ್ತರು ವಿವಿಧ ಹರಕೆ ಪೂಜೆ ಸಲ್ಲಿಸಿದರು. ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಆಂದ್ರಪ್ರದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತವೃಂದದವರು ಭಕ್ತಿಕಾಣಿಕೆ ಸಮರ್ಪಿಸಿದರು. ಸಂಪ್ರದಾಯದಂತೆ ಉಡಿ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

Exit mobile version