ಶಿವಮೊಗ್ಗ: ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಪ್ರಬಲ ಸಮುದಾಯಗಳ ಸೇರ್ಪಡೆ ವಿರೋಧಿಸಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಹಾಗೂ ಈಡಿಗ ಸಮಾಜದ ನಿಗಮ ಮಂಡಳಿ ಸ್ಥಾಪಿಸಿ 500 ಕೋಟಿ ರೂ. ಅನುದಾನ ಮೀಸಲಿಡಲು ಆಗ್ರಹಿಸಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯಿಂದ (ಎಸ್‌ಎನ್‌ಜಿವಿ) ನಗರದಲ್ಲಿ ಭಾನುವಾರ (ಜ.೨೨) ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಯಿತು.
ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿಟ್ಟೂರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಶಿವಮೊಗ್ಗ ಜಿಲ್ಲೆ ಹೋರಾಟಗಾರರ ನಾಡಾಗಿದೆ. ಈ ನಾಡಲ್ಲಿ ಹೋರಾಟ ಮಾಡಿ ಹಲವರು ಬಡವರಿಗೆ ನ್ಯಾಯ ಸಿಕ್ಕಿದೆ. ಹೋರಾಟಗಾರ ಬಂಗಾರಪ್ಪ ಹುಟ್ಟಿದ ನಾಡು ಇದು. ಯಾವುದಾದರೂ ಕೆಲಸ ಆಗಬೇಕಿದ್ದರೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯ. ಯಾವುದೇ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ಒಗ್ಗಟ್ಟು ಮುಖ್ಯ. ಎಲ್ಲ ಸಮುದಾಯದ ಮಠಗಳನ್ನು ಹಾಗೂ ಸಂಘಗಳನ್ನು ಕಟ್ಟಿಕೊಂಡು ಹೋರಾಟ ಮಾಡುತ್ತಿದ್ದಾರೆ. ನಾವು ಇನ್ನೂ ಮಲಗಿಕೊಂಡಿದ್ದೇವೆ. ಸಮಾಜದ ಮುಂದಿನ ಪೀಳಿಗೆಗೆ ಹೋರಾಟ ಮಾಡುವುದು ತಪ್ಪಲ್ಲ. ನಮ್ಮ ಈಡಿಗ ಸಮುದಾಯಕ್ಕೆ ಒಂದು ನಿಗಮ ಬೇಕು. ಈ ಕೂಡಲೇ ಈ ಸಮುದಾಯಕ್ಕೆ ನಿಗಮ ಮಂಡಳಿ ಆಗಬೇಕು ಎಂದು ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ. ಈಡಿಗ ಸಮಾಜ ನಡೆದುಕೊಳ್ಳುತ್ತಿರುವ ಸಿಗಂದೂರು ದೇವಾಲಯವನ್ನು ಕಿತ್ತುಕೊಳ್ಳುವ ಯತ್ನ ನಡೆದಿದೆ. ಸರ್ಕಾರ ಹಸ್ತಕ್ಷೇಪವನ್ನು ತಕ್ಷಣ ನಿಲ್ಲಿಸಬೇಕು. ನಿಗಮ ಮಂಡಳಿ ನೀಡಿ 500 ಕೋಟಿ ರೂ. ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ನಿಪ್ಪಾಣಿಯ ಅರುಣಾನಂದ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗದ ಮೀಸಲಾಗಿ ಉಳಿಸಲು ಕಾಂತರಾಜ ವರದಿ ಕೂಡಲೇ ಜಾರಿಗೊಳಿಸಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ನಿಗಮ ಮಂಡಳಿ ರಚಿಸಬೇಕು. ನಿಗಮ ಮಂಡಳಿಗೆ 500 ಕೋಟಿ ರೂ. ಅನುದಾನ ಮೀಸಲಿಡಬೇಕು. ಸಿಗಂದೂರು ದೇವಸ್ಥಾನದಲ್ಲಿ ಸರ್ಕಾರ ಯಾವ ರೀತಿಯ ಹಸ್ತಕ್ಷೇಪ ಮಾಡಬಾರದು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದ ಶ್ರೀಗಳು, ಬೇರೆಯವರ ಮೀಸಲಾತಿ ಹೋರಾಟವನ್ನು ನಾವು ನೋಡುತ್ತಿದ್ದೇವೆ. ನಾವು ಸಂಘಟಿತರಾದರೆ ಸರ್ಕಾರವೇ ನಮ್ಮ ಕಾಲ ಬುಡಕ್ಕೆ ಬರುತ್ತದೆ ಎಂದು ಹೇಳಿದರು.
ಇದನ್ನೂ ಓದಿ | Drunken Teacher: ಶಾಲೆಗೆ ಕುಡಿದು ಟೈಟ್ ಆಗಿ ಬಂದ ಶಿಕ್ಷಕ; ಕ್ರಮಕ್ಕೆ ಸ್ಥಳೀಯರ ಆಗ್ರಹ
ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಸಮಾವೇಶ ಏರ್ಪಡಿಸಿ ಹಕ್ಕೊತ್ತಾಯ ಮಾಡಿದ್ದೀರಿ. ಸಂವಿಧಾನ ನಮಗೆ ಹಕ್ಕನ್ನು ನೀಡಿದೆ. ಅದನ್ನು ಕೇಳದೆ ಹೋದರೆ ಯಾರಿಗೂ ಕೊಡಲ್ಲ. ನಾವು ಹಿಂದೆಯೂ ಸಹ ಸಮಾವೇಶ ಮಾಡಿ ಹಕ್ಕೊತ್ತಾಯ ಮಾಡಿದ್ದೆವು. ಈಗ ಹೊಸ ಪೀಳಿಗೆಯವರು ಮಾಡಿದ ಹೋರಾಟ ಯಶಸ್ವಿಯಾಗಿವೆ. ಮೀಸಲಾತಿಯಿಂದ ನಮಗೆ ಅನನೂಕೂಲವಾಗುತ್ತದೆ ಎಂಬ ಅಂಶವನ್ನು ಸಿಎಂ ಜತೆಗೆ ಚರ್ಚೆ ಮಾಡಿದ್ದೇವೆ. ಹಿಂದುಳಿದ ವರ್ಗದ ಅಧ್ಯಕ್ಷರ ಜತೆ ಸಭೆ ನಡೆಸಿದ್ದೇವೆ. ಯಾವುದೇ ಭಯಪಡುವ ಅಗತ್ಯ ಇಲ್ಲ ಎಂಬ ಅಂಶ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಮೀಸಲಾತಿ ವಿಷಯವು ಕೋರ್ಟ್‌ನಲ್ಲಿದೆ. ರಾಜಕಾರಣಿಗಳ ಸಹಾಯ ಕೇಳದೇ ಹೋರಾಟ ಮುಂದುರಿಸಿ. ಕಾಂತರಾಜ ವರದಿ ಜಾರಿಯು ಈಗ ಆಗುವುದಿಲ್ಲ. ನಿಗಮವೊಂದು ರಚನೆ ಆಗಬೇಕು ಎಂಬ ಒತ್ತಾಯವಾಗಿದೆ. ಕಾಂತರಾಜು ವರದಿಯಲ್ಲಿ ಕೆಲ ಸಣ್ಣ-ಪುಟ್ಟ ತಪ್ಪು ಇದೆ. ಹಿಂದೆ ಅಧಿಕಾರಿಗಳು ಕೊಟ್ಟ ತಪ್ಪು ಮಾಹಿತಿಯಿಂದ ಕಾಗೋಡು ತಿಮ್ಮಪ್ಪನವರು ಹಕ್ಕುಪತ್ರ ನೀಡಿದ್ದಾರೆ. ಒಂದು ಗುಂಟೆ ಭೂಮಿಯನ್ನು ಬಿಡಿಸಲು ನಾವು ಬಿಡಲ್ಲ ಎಂದರು.
ರಾಜ್ಯದಲ್ಲಿ ಮುಂದೆ ಸುನೀಲ್ ಕುಮಾರ್ ಅವರಿಗೆ ಭವಿಷ್ಯವಿದೆ. ಸ್ವಾಮಿಜೀಗಳು ಈಗ 8 ಜನ ಇದ್ದಾರೆ. ಇವರೆನ್ನೆಲ್ಲಾ ಒಗ್ಗೂಡಿಸಬೇಕು. ಶರಾವತಿ ಮುಳುಗಡೆಯಲ್ಲಿ 20 ಸಾವಿರ ಜನ ಇದ್ದೇವೆ. ಅದೇ ರೀತಿ ಬಗರ್ ಹುಕುಂ ನಲ್ಲೂ ನಮ್ಮವರೇ ಹೆಚ್ಚಾಗಿ ಇದ್ದಾರೆ ಎಂದರು.
ಇದನ್ನೂ ಓದಿ | Rahul Gandhi ಭದ್ರತೆ ಕುರಿತು ಯಾವುದೇ ರಾಜಿ ಇಲ್ಲ ಎಂದ ಜೈರಾಮ್ ರಮೇಶ್
ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮುಂತಾದವರು ಪಾಲ್ಗೊಂಡಿದ್ದರು. ಸಮಾವೇಶಕ್ಕೆ ಮುನ್ನ ಇಲ್ಲಿನ ಸಾಗರ ರಸ್ತೆಯ ಈಡಿಗರ ಭವನದಿಂದ ಬಿ.ಎಚ್. ರಸ್ತೆಯ ಸೈನ್ಸ್ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಶಿವಮೊಗ್ಗ ಹಾಗೂ ಸುತ್ತಲಿನ ಜಿಲ್ಲೆಗಳಿಂದ ಬಂದಿದ್ದ ಸಮುದಾಯದವರು ಹಳದಿ ಬಾವುಟ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.