ಶಿವಮೊಗ್ಗ: ಅಲ್ಲೊಂದು ಭಾವುಕಲೋಕ ಸೃಷ್ಟಿಯಾಗಿತ್ತು, ಎಲ್ಲರ ಮುಖದಲ್ಲಿಯೂ ಒಂದು ಧನ್ಯತಾಭಾವ. ೨೭ ವರ್ಷಗಳ ನಂತರ ಪರಸ್ಪರ ಒಬ್ಬರನ್ನೊಬ್ಬರು ಭೇಟಿಯಾದ ಮಧುರ ಕ್ಷಣ. ಎಷ್ಟೋ ವರ್ಷಗಳ ಬಳಿಕ ಸಹೋದ್ಯೋಗಿಗಳ ಭೇಟಿ, ಕಲಿಯುವಾಗ ತರಲೆಯಾಗಿದ್ದ ಶಿಷ್ಯರ ವಿನೀತ ಭಾವ, ಕುಚುಕು ಗೆಳೆಯರ ಆಲಿಂಗನ, ಗೆಳತಿಯರ ಸಂಭ್ರಮ, ಮಕ್ಕಳ ಕಲರವ.
ಇದು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ೧೯೯೩-೯೬ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಶನಿವಾರ (ಫೆ. ೪) ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಕಂಡು ಬಂದ ಅವಿಸ್ಮರಣೀಯ ದೃಶ್ಯ. ಸಹ್ಯಾದ್ರಿ ಕಾಲೇಜಿನಲ್ಲಿ ಕಲಿತು ಈಗ ತಮ್ಮದೇ ಜೀವನ ಕಟ್ಟಿಕೊಂಡಿರುವ ಶಿಷ್ಯ ವರ್ಗ ತಮಗೆ ಶಿಕ್ಷಣ ನೀಡಿದ್ದ ಗುರುವರ್ಯರನ್ನು ನೆನೆದು ಅವರಿಗೆ ಗೌರವ ಸರ್ಮರ್ಪಣೆ ಮಾಡುವ ಮಾದರಿ ಕಾರ್ಯಕ್ರಮ ಅದಾಗಿತ್ತು.
ರಾಜ್ಯದ ಬೇರೆ ಬೇರೆ ಭಾಗದಲ್ಲಿ ವಿಶ್ರಾಂತ ಜೀವನ ಕಳೆಯುತ್ತಿದ್ದ ಗುರುಗಳನ್ನು ಒಂದು ಕಡೆ ಸೇರಿಸಿದ್ದ ಶಿಷ್ಯ ವರ್ಗ ಗುರುಗಳ ಪಾದ ಪೂಜೆ ಮಾಡುವ ಮೂಲಕ ಗುರು ನಮನ ಸಲ್ಲಿಸಿದರು. ಈ ಸಂದರ್ಭ ಭಾವುಕರಾದ ಗುರು-ಶಿಷ್ಯರ ಕಣ್ಣಾಲಿಗಳು ತೇವವಾಗಿದ್ದವು. ಶಿಷ್ಯ ವರ್ಗದ ಪ್ರೀತಿಗೆ ಖುಷಿಗೊಂಡ ಗುರುಗಳು ಶಿಷ್ಯರೊಂದಿಗೆ ಮಕ್ಕಳಂತೆ ಬೆರೆತು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ: Supreme Court ನ್ಯಾಯಮೂರ್ತಿಗಳಾಗಿ ಐವರು ಜಡ್ಜ್‌ಗಳಿಂದ ಪ್ರಮಾಣ ವಚನ ಸ್ವೀಕಾರ
ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ೫೭ ಗುರುಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ೧೯೯೩-೯೬ನೇ ಸಾಲಿನಲ್ಲಿ ಪ್ರಾಚಾರ್ಯರಾಗಿದ್ದ ಪ್ರೊ.ಎ.ಎಸ್.ಚಂದ್ರಶೇಖರ್, ನನಗೆ ಮತ್ತೆ ಕಾಲೇಜಿಗೆ ಬಂದ ಅನುಭವ ಆಗಿದೆ. ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಎಲ್ಲ ನನ್ನ ಸಹೋದ್ಯೋಗಿಗಳನ್ನು ಒಂದೆಡೆ ಸೇರಿಸಿದ್ದೀರಿ. ಇದೊಂದು ಮಾದರಿ ಮತ್ತು ಎಂದೂ ಮರೆಯಲಾರದ ಕಾರ್ಯಕ್ರಮವಾಗಿದೆ. ಗುರು-ಶಿಷ್ಯ ಪರಂಪರೆ ಇದೇ ರೀತಿ ಮುಂದುವರಿಯಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ಮಾಡೋಣ ಎಂದು ಹೇಳಿದರು.
ಸಹ್ಯಾದ್ರಿ ಕಾಲೇಜಿನ ಹಾಲಿ ಪ್ರಾಚಾರ್ಯ ಡಾ.ರಾಜೇಶ್ವರಿ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ತುಂಬಾ ಮಹತ್ವ ಇದೆ. ನಿಮಗೆ ಕಲಿಸಿದ ಗುರುಗಳನ್ನು ಇಷ್ಟು ವರ್ಷಗಳ ಬಳಿಕ ಸ್ಮರಿಸಿ ಸನ್ಮಾನಿಸುತ್ತಿರುವುದು ಬಹುಶ ಇದೇ ಮೊದಲು. ಶಿಷ್ಯ ವರ್ಗದ ಇಂತಹ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ಗುರುಗಳಾದ ಪ್ರೊ.ಎಚ್.ಎಂ.ವಾಗ್ಧೇವಿ, ಪ್ರೊ. ಗಾಯತ್ರಿ ದೇವಿ ಸಜ್ಜನ್, ಪ್ರೊ.ಪುಷ್ಪಲತಾ, ಪ್ರೊ.ಸುಭಾಷ್, ಪ್ರೊ.ದಿವಾಕರ್, ಪ್ರೊ.ಸುಬ್ರಹ್ಮಣ್ಯಂ, ಡಾ.ನಾಗರಾಜ್, ಪ್ರೊ.ಜಯದೇವಪ್ಪ, ಪ್ರೊ.ಗೌಡರ ಶಿವಣ್ಣನವರ್, ಡಾ.ಪರಮೇಶ್ವರ್ ನಾಯ್ಕ್, ಮಂಜುಳಾ, ನಾಗರಾಜ್, ಪ್ರೊ.ನಾಗಭೂಷಣ್ ರೆಡ್ಡಿ ಮಾತನಾಡಿ, ಹಳೆಯ ನೆನಪು ಹಂಚಿಕೊಂಡರು.
ಇದನ್ನೂ ಓದಿ: ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್: ಈ ಬಾರಿಯೂ ಆಗಲಿದೆ ಉತ್ತಮ ಮಳೆ-ಬೆಳೆ ಎಂದು ನುಡಿದ ಕಾರಣಿಕ
ಹಿರಿಯ ವಿದ್ಯಾರ್ಥಿ ಜೇಸುದಾಸ್ ಪಿ ಪ್ರಾಸ್ತಾವಿಕ ಭಾಷಣ ಮಾಡಿದರು. ಗುರುವಂದನಾ ಸಮಿತಿಯ ಅಧ್ಯಕ್ಷ ಉಮೇಶ್ ಮಾನೆ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಕೆ.ಎನ್.ಗಿರೀಶ್, ವೇಣುಗೋಪಾಲ್, ನಿರಂಜನ ವೇದಿಕೆಯಲ್ಲಿದ್ದರು. ನಾಗರಾಜ್ ನೇರಿಗೆ ನಿರೂಪಿಸಿದರು. ನರಸಿಂಹ ಕೆ ಮತ್ತು ಜ್ಞಾನೇಶ್ ಎಂ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಶಿವಕುಮಾರ್ ಪ್ರಾರ್ಥಿಸಿದರು. ಪರಮೇಶ್ವರ್ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು. ಆಶಾ ಸ್ವಾಗತಿಸಿದರು. ಲತಾಮಣಿ ವಂದಿಸಿದರು.
ಶ್ರದ್ಧಾಂಜಲಿ:ಕಾರ್ಯಕ್ರಮಕ್ಕೂ ಮುನ್ನ ನಿಧನರಾದ ಅಧ್ಯಾಪಕರು ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಇಂದಿನ ಕಾರ್ಯಕ್ರಮ ಸಾರಿದೆ. ತಮ್ಮದೇ ಆದ ವೈಯಕ್ತಿಕ ಸಮಸ್ಯೆಗಳು ಎಲ್ಲರಿಗೂ ಇರುತ್ತವೆ. ಆದರೆ ಗುರುವಂದನೆ ಕಾರ್ಯಕ್ರಮ ಮಾಡಿ ಎಲ್ಲ ಅಧ್ಯಾಪಕರನ್ನು ಒಂದೆಡೆ ಸೇರಿಸುವ ಮೂಲಕ ೧೯೯೩-೯೬ನೇ ಬ್ಯಾಚ್‌ನ ಶಿಷ್ಯಕೂಟ ಮಾದರಿ ಕೆಲಸ ಮಾಡಿದೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು ಹೇಳಿದರು.
ಸೆಲ್ಫಿ ಸಂಭ್ರಮ: ಬಹಳ ವರ್ಷಗಳ ನಂತರ ಪರಸ್ಪರ ಭೇಟಿಯಾದ ಸವಿನೆನಪಿಗಾಗಿ ಎಲ್ಲೆಂದರಲ್ಲಿ ಸೆಲ್ಫಿ ಸಂಭ್ರಮವೇ ಎದ್ದುಕಾಣುತಿತ್ತು. ಶಿಷ್ಯವರ್ಗ ತಮ್ಮ ಗುರುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಮಕ್ಕಳು, ಕುಟುಂಬ ವರ್ಗದವರ ಜತೆ ಬಂದ ಕೆಲವರು ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು.
ಇದನ್ನೂ ಓದಿ: India Energy week 2023 : ಮೋದಿ ಕಾರ್ಯಕ್ರಮ ವೇದಿಕೆಯಲ್ಲಿ ಒಂದೇ ಒಂದು ಕನ್ನಡದ ಪದವೂ ಇಲ್ಲ!
ಸಾಂಸ್ಕೃತಿಕ ಕಾರ್ಯಕ್ರಮ: ಹಿರಿಯ ವಿದ್ಯಾರ್ಥಿಗಳು ಮತ್ತು ಕುಟುಂಬ ವರ್ಗಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲರೂ ಕುಣಿದು ಸಂಭ್ರಮಿಸುವ ಮೂಲಕ ಕಾಲೇಜು ದಿನಗಳನ್ನು ಮರುಸೃಷ್ಟಿಸಿಕೊಂಡರು.