ಸೊರಬ: ತಾಲೂಕಿನ ಚಂದ್ರಗುತ್ತಿಯ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ (Chandragutti Renukamba temple) ಬುಧವಾರ ರಾತ್ರಿ ಕಳ್ಳತನಕ್ಕೆ ವಿಫಲ ಯತ್ನ (Theft attempt) ನಡೆದಿದೆ. ದುಷ್ಕರ್ಮಿಗಳು ಕಿತ್ತೊಗೆದಿದ್ದ ಶ್ರೀ ದೇವಿಯ ಮೂರ್ತಿಯ ಮುಖವಾಡವನ್ನು ಸಕಲ ವಿಧಿ ವಿಧಾನಗಳೊಂದಿಗೆ ಗುರುವಾರ ಪುನರ್ ಪ್ರತಿಷ್ಠಾಪನೆ ಮಾಡಲಾಯಿತು.
ಘಟನೆ ಹಿನ್ನೆಲೆ ಏನು?
ದೇವಸ್ಥಾನಕ್ಕೆ ಮೂರು ದ್ವಾರಗಳಿದ್ದು, ಪೂರ್ವ ಬಾಗಿಲಿನ ಬೀಗ ಮುರಿದು ದೇವಸ್ಥಾನ ಪ್ರವೇಶ ಮಾಡಿರುವ ಕಳ್ಳರು ಗರ್ಭಗುಡಿಯಲ್ಲಿದ್ದ ಶ್ರೀ ದೇವಿಯ ಮೂರ್ತಿಯ ಮುಖವಾಡವನ್ನು ಕಿತ್ತಿದ್ದಾರೆ. ಕಳೆದ ಆಗಸ್ಟ್ 1ರಂದು ಅಧಿಕ ಶ್ರಾವಣ ಹುಣ್ಣಿಮೆ ಅಂಗವಾಗಿ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಈ ವೇಳೆ ಕಾಣಿಕೆ ಹುಂಡಿಯಲ್ಲಿ ಅಧಿಕ ಮೊತ್ತದ ಕಾಣಿಕೆ ಸಂಗ್ರಹವಾಗುತ್ತದೆ ಎಂದು ಭಾವಿಸಿ ಕಳ್ಳತನಕ್ಕೆ ಯತ್ನ ನಡೆದಿದೆ ಎನ್ನಲಾಗಿದೆ. ಇದಕ್ಕೂ ಮೊದಲ ಶೂಲದ ಬೀರಪ್ಪ ದೇವಸ್ಥಾನದಲ್ಲಿಯೂ ಕಳವಿಗೆ ವಿಫಲ ಯತ್ನ ನಡೆದಿದೆ.
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ತುಂತುರು, ಕರಾವಳಿಯಲ್ಲಿ ವ್ಯಾಪಕ ಮಳೆ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್ ಹುಸೇನ್ ಸರಕಾವಸ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್, ಸಿಪಿಐ ಎಲ್. ರಾಜಶೇಖರ್ ಹಾಗೂ ಕ್ರೈಂ ಪಿಎಸ್‍ಐ ಮಾಳಪ್ಪ ಚಿಪ್ಪಲಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಡರಾತ್ರಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Vijayanagara News: ಹೊಸಪೇಟೆಯಲ್ಲಿ ಮನೆ ಕಳವು ಪ್ರಕರಣದ ಇಬ್ಬರು ಆರೋಪಿಗಳ ಬಂಧನ
ದೇವಸ್ಥಾನಕ್ಕೆ ಸೂಕ್ತ ಭದ್ರತೆ ಇಲ್ಲದೇ ಇರುವುದರಿಂದ ಇಂತಹ ಘಟನೆಗಳು ನಡೆದಿದೆ. ದೇವಸ್ಥಾನಕ್ಕೆ ಕಾವಲುಗಾರರ ನೇಮಕ, ಸಿಸಿ ಕ್ಯಾಮೆರಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಪ್ರಸನ್ನ ಶೇಟ್, ಗ್ರಾ.ಪಂ ಸದಸ್ಯರಾದ ಎಂ.ಪಿ. ರತ್ನಾಕರ, ರೇಣುಕಾಪ್ರಸಾದ್, ತಾ.ಪಂ ಮಾಜಿ ಸದಸ್ಯ ಸುನೀಲ್ ಗೌಡ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಒತ್ತಾಯ ಮಾಡಿದ್ದಾರೆ.
ದೇವಿಯ ಮೂರ್ತಿಯ ಮುಖವಾಡದ ಕಳುವಿಗೆ ಯತ್ನ ನಡೆದಿರುವುದು ಭಕ್ತರಲ್ಲಿ ಬೇಸರಕ್ಕೆ ಕಾರಣವಾಗಿದೆ. ಇನ್ನು ಜಿಲ್ಲೆಯಲ್ಲಿಯೇ ಎ ಗ್ರೇಡ್ ದೇವಸ್ಥಾನ ಎಂಬ ಖ್ಯಾತಿಗೆ ಶ್ರೀ ರೇಣುಕಾಂಬ ದೇವಸ್ಥಾನ ಪಾತ್ರವಾಗಿದ್ದು, ಸರ್ಕಾರಕ್ಕೆ ದೇವಸ್ಥಾನದಿಂದ ವಾರ್ಷಿಕವಾಗಿ ಸುಮಾರು 2 ಕೋಟಿ ರೂ., ಕಾಣಿಕೆ ರೂಪದಲ್ಲಿ ಆದಾಯ ದೊರೆಯುತ್ತಿದೆ.