ಶಿವಮೊಗ್ಗ: ಜಾತಿಯ ವಿಷ ಬೀಜ ಬಿತ್ತುವವರನ್ನು ಕಿತ್ತೊಗೆಯುವ ಸಮಯ ಬಂದಿದ್ದು, ನಾವೆಲ್ಲ ಒಂದೇ ಎನ್ನುವ ಮಹಾಪುರಷರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಆಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಶನಿವಾರ (ಜ.೨೧) ಆಯೋಜಿಸಲಾಗಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿಜಶರಣ ಅಂಬಿಗರ ಚೌಡಯ್ಯ ಈ ನಾಡು ಕಂಡ ಅಪರೂಪದ ಮಹಾನ್ ಪುರಷ. ನಮ್ಮಲ್ಲಿ ಹಿರಿಮೆ ಇರಬೇಕು, ಕೀಳರಿಮೆ ಅಲ್ಲ ಎಂದು ತೋರಿದವರು. ಅನುಭವ ಮಂಟಪದಲ್ಲಿ ಯಾವುದೇ ಮುಲಾಜಿಲ್ಲದೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ನಿಜವಾದ ಧ್ವನಿಯಾಗಿದ್ದ ಅವರನ್ನು ಬಸವಣ್ಣನವರು ನಿಜಶರಣ ಎಂದು ಕರೆದಿದ್ದಾರೆ.
ಇದನ್ನೂ ಓದಿ: WOMENS IPL | ಮಹಿಳೆಯರ ಐಪಿಎಲ್ ತಂಡ ಖರೀದಿಸಲು ಆಸಕ್ತಿ ತೋರಿದ 30 ಕಂಪನಿಗಳು
ಹಿಂದೆ ಭಾರತ ವಿಶ್ವಗುರು ಆಗಿದ್ದು ನಡುವಿನಲ್ಲಿ ಬಡ ರಾಷ್ಟ್ರವಾಗಿತ್ತು, ಇದೀಗ ಮತ್ತೆ ಇಂತಹ ಮಹಾನ್ ಪುರುಷರ ಪರಿಶ್ರಮದಿಂದಾಗಿ ವಿಶ್ವಗುರುವಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ರಾಷ್ಟ್ರ ಸಬಲವಾಗುತ್ತಿದೆ. ರಾಜ್ಯ ಸರ್ಕಾರ ಹಿಂದುಳಿದವರ ಅಭಿವೃದ್ಧಿಗೆ ಬದ್ಧವಾಗಿದ್ದು, ಅಭಿವೃದ್ಧಿ ಕಾರ್ಯಕಗಳನ್ನು ಕೈಗೊಂಡಿದೆ. ಶಿವಮೊಗ್ಗದಲ್ಲಿ ಸಮಾಜದ ಏಳ್ಗೆಗಾಗಿ ದುಡಿದ ಗಾಂಧಿ ಬಸಪ್ಪನವರ ಹೆಸರನ್ನು ಸರ್ಕಲ್ ಮತ್ತು ರಸ್ತೆಗೆ ಇಡಲು ಸರ್ಕಾರ ನಿರ್ಧರಿಸಿದ್ದು, ಫೆ. 8ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಕರಣ ಮಾಡುವರು ಎಂದು ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, 12 ನೇ ಶತಮಾನದ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಬೆನ್ನೆಲುಬಾಗಿ ನಿಂತವರಲ್ಲಿ ಅಂಬಿಗರ ಚೌಡಯ್ಯ ಸಹ ಅಗ್ರಗಣ್ಯರು. ಲೋಕ ಕಲ್ಯಾಣಕ್ಕಾಗಿ ಸ್ವಂತ ಒಡೆತನದ ಭೂಮಿಯನ್ನು ದಾನ ಮಾಡಿದ ಮಹಾನ್ ಶರಣರು ಇವರಾಗಿದ್ದು ಸಾಮಾಜಿಕವಾದ ಅನೇಕ ವಿರೋಧಗಳ ನಡುವೆಯೂ ವಚನ ಸಾಹಿತ್ಯದ ಮೂಲಕ ಸುಧಾರಣೆ ತಂದವರು. ದೋಣಿಗೆ ಹುಟ್ಟುಹಾಕುವ ಮೂಲಕ ನಂಬಿದವರನ್ನು ದಡ ಸೇರಿಸುವ ಮಹಾನ್ ಕಾಯಕ ಯೋಗಿ ಎಂದರು.
ಇದನ್ನೂ ಓದಿ: JP Nadda | ಶ್ರೀ ಸಿದ್ದೇಶ್ವರ ಸ್ವಾಮಿಗಳ ಜ್ಞಾನ ಯೋಗಾಶ್ರಮಕ್ಕೆ ಭೇಟಿ: ಆಧ್ಯಾತ್ಮಿಕತೆ-ಮಾನವೀಯತೆಯ ಸಂಗಮ ಎಂದ ನಡ್ಡಾ
ಶಿಕಾರಿಪುರದಲ್ಲಿ ಅಕ್ಕಮಹಾದೇವಿ ಜನ್ಮಸ್ಥಳವನ್ನು ಅಕ್ಷರಧಾಮದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ನಾಡಿನ 30 ಶರಣರ ಪುತ್ಥಳಿಗಳನ್ನು ಅನಾವರಣ ಮಾಡಲಾಗುತ್ತಿದೆ. ಅದರಲ್ಲಿ ಅಂಬಿಗರ ಚೌಡಯ್ಯನವರ ಪುತ್ಥಳಿ ಸಹ ಇದ್ದು, 12ನೇ ಶತಮಾನದ ಮಹಿಳಾ ಧ್ವನಿಯಾದ ಅಕ್ಕಮಹಾದೇವಿಯವರ ಸುಮಾರು 75 ಅಡಿಗಿಂತ ಎತ್ತರದ ಪುತ್ಥಳಿಯನ್ನು ಅನಾವರಣ ಮಾಡಲಾಗುತ್ತಿದೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಉಪ ಕುಲಸಚಿವ ಡಾ. ಶ್ರೀಶೈಲ ಸಿ. ಹರಕಂಚಿ ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ: ಶ್ರೀಗಳ ಬದುಕು ಸೇವೆಯ ಪ್ರತೀಕ, ತ್ಯಾಗಮಯ; ಸಿದ್ದಲಿಂಗ ಸ್ವಾಮೀಜಿ
ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಡಿ.ಬಿ.ಕೆಂಚಪ್ಪ, ಜಿಲ್ಲಾ ಮೊಗವೀರರ ಸಂಘದ ಅಧ್ಯಕ್ಷ ಅಣ್ಣಪ್ಪ, ತಾಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ಸತೀಶ್ ಗಾಂಧಿ ಬಸಪ್ಪ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಅವಿನ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಎಚ್ ಇತರರು ಹಾಜರಿದ್ದರು.