Site icon Vistara News

Shivamogga News: ಅಮೂಲ್ಯವಾದ ಸಮಯ, ಅವಕಾಶಗಳ ಸದುಪಯೋಗ ಅಗತ್ಯ: ರವಿ ಚನ್ನಣ್ಣನವರ್

Keonics MD Ravi Channannavar shivamogga

#image_title

ಶಿವಮೊಗ್ಗ: ಜಗದ ಎಲ್ಲ ರೋಗ ರುಜುನಗಳಿಗೆ ಶಿಕ್ಷಣವೇ ಮದ್ದು ಎಂದು ಕಿಯೊನಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿ ಡಿ .ಚನ್ನಣ್ಣನವರ್ ತಿಳಿಸಿದರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಚಿರಾಗ್ ಇನ್ಫೋಟೆಕ್, ಎಂ.ಬಿ.ಎ ಮತ್ತು ಎಂ.ಸಿ.ಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ಕಿಯೋನಿಕ್ಸ್ ಸಂಸ್ಥೆಯ ಉನ್ನತ ತರಬೇತಿ ಮಾಹಿತಿ‌ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

#image_title

ಬದುಕಿನಲ್ಲಿ ಸಮಯ ಮತ್ತು ಅವಕಾಶ ಅಮೂಲ್ಯವಾದದ್ದಾಗಿದೆ. ಓದುವ ಸಮಯ, ಸಾಧಿಸುವ ಅವಕಾಶ ಸದಾ ಬದುಕಿನಲ್ಲಿ ಸಿಗುವುದಿಲ್ಲ. ಸಿಗುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಜೀವನದಲ್ಲಿ ಏನೇ ಸಾಧನೆ ಸಾಧ್ಯವಾಗುತ್ತದೆ ಎಂದಾದರೆ ಅದು ನಮ್ಮ ಓದಿನ ಹಪಾಹಪಿಯಿಂದ ಮಾತ್ರ. ಹಿಂದೆ ಯಾಗಗಳ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಲಾಗುತ್ತಿತ್ತು. ಇಂದು ವಿದ್ಯೆಯ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಯಾಗ ನಡೆಯುತ್ತಿದೆ ಎಂದು ಹೇಳಿದರು.

ನಮ್ಮೂರಿನ ಹಳ್ಳಿಯ ಶಾಲೆಯಿಂದ ಪದವಿಗೆ ತಲುಪಲು ಸಾಧ್ಯವಾಗಿದ್ದು ಕೆಲವೇ ಕೆಲವರಿಗೆ ಮಾತ್ರ. ವಿದ್ಯಾರ್ಥಿಯಾಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಾಧಕರಾಗಲು ಬಯಸುವವರಿಗೆ ಜಗತ್ತನ್ನು ಸಂತೋಷ ಪಡಿಸುವ ತೊಂದರೆ ಬೇಡ, ನಿಮ್ಮ ಆತ್ಮ ತೃಪ್ತಿಗಾಗಿ ಕೆಲಸ ಮಾಡಿ. ಅದಕ್ಕಾಗಿ ವಿವೇಕ ಚೂಡಾಮಣಿಯಂತಹ ಪುಸ್ತಕಗಳ ಅಧ್ಯಯನ ನಡೆಸಿ. ನಮ್ಮ ಚಂದನವನ ಸದಾಚಾರಗಳ ಚಂದನವನವಾಗಿರಬೇಕು. ಆಂತರಿಕ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ಉತ್ತಮ ವಿದ್ಯಾರ್ಥಿಯ ಪ್ರಮುಖ ಗುಣಲಕ್ಷಣಗಳೆಂದರೆ ಗ್ರಹಿಕೆ, ಕೇಳುವಿಕೆ ಮತ್ತು ಬರೆಯುವಿಕೆ. ಈ ಗುಣಲಕ್ಷಣ ಗಳೊಂದಿಗೆ ನಿರಂತರ ಕಲಿಕೆ ನಿಮ್ಮದಾಗಲಿ. ಈ ಜಗತ್ತಿನಲ್ಲಿ ಪೊಲೀಸರಿಗೆ ಇರುವಷ್ಟು ಅವಕಾಶ ಯಾರಿಗೂ ಇಲ್ಲ. ಈ ಜಗತ್ತಿಗೆ ಶಾಂತಿಯ ಅವಶ್ಯಕತೆಯಿದೆ. ಅಂತಹ ಶಾಂತಿ ಮತ್ತು ಸುಭದ್ರತೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Supreme Court: ದ್ವೇಷ ಭಾಷಣದ ಆರೋಪ, ಹಿಂದೂ ಜನ್ ಆಕ್ರೋಶ್ ಸಭೆ ಚಿತ್ರೀಕರಿಸಲು ಕೋರ್ಟ್ ಸೂಚನೆ

ಎರಡನೇ ಜನ್ಮ ಕೊಟ್ಟ ಶಿವಮೊಗ್ಗ

ಇಡೀ ಕರ್ನಾಟಕಕ್ಕೆ ರವಿ ಚನ್ನಣ್ಣನವರ್ ಯಾರು ಎಂದು ಪರಿಚಯಿಸಿದ್ದು ಶಿವಮೊಗ್ಗ ಜಿಲ್ಲೆ. ಇಲ್ಲಿ ಕೆಲಸ ಮಾಡಿದ ಪ್ರತಿ ದಿನವೂ ಸಂಭ್ರಮವೇ ಆಗಿತ್ತು. ಶಿವಮೊಗ್ಗ ಜಿಲ್ಲೆ ನನಗೆ ಎರಡನೇ ಜನ್ಮ ಕೊಟ್ಟ ಪುಣ್ಯ ಭೂಮಿ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಸಂಸ್ಥೆಯ ಆಯೋಜಕ ನಿರ್ದೇಶಕ ಕುಮಾರ್‌ ಪಿ, ಕೋರ್ಸ್ ನಿರ್ದೇಶಕ ಡಾ.ಸರೀತ್ ಕುಮಾರ್, ಜೆ.ಎನ್.ಎನ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ. ನಾಗೇಂದ್ರ ಪ್ರಸಾದ್, ಡಿವೈಎಸ್ಪಿ ಸುರೇಶ್, ಚಿರಾಗ್ ಇನ್ಫೋಟೆಕ್ ನ ಗಿರೀಶ್. ಡಿ.ಪಿ, ಎಂಸಿಎ ವಿಭಾಗದ ನಿರ್ದೇಶಕ ಡಾ.ಪ್ರಭುದೇವ, ಎಂಬಿಎ ವಿಭಾಗದ ನಿರ್ದೇಶಕ ಡಾ.ಶ್ರೀಕಾಂತ್, ಸಹ ಪ್ರಾಧ್ಯಾಪಕರಾದ ಪ್ರಶಾಂತ್ ಅಂಕಲಕೋಟಿ, ವಿಕ್ರಮ್ ಮತ್ತಿತರರು ಉಪಸ್ಥಿತರಿದ್ದರು.

Exit mobile version