ಶಿವಮೊಗ್ಗ: ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರ ಪರವಾಗಿ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಸುಮಾರು 305 ರೈತರಿಗೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳು ಫೆ. 5ರ ಒಳಗಾಗಿ ನಿವೇಶನ ಹಂಚಿಕೆ ಮಾಡಬೇಕು ಹಾಗೂ ಸಾಗುವಳಿ ಚೀಟಿ ನೀಡಿರುವ ರೈತರಿಗೆ ಪಹಣಿ ನೀಡಬೇಕು, ಇಲ್ಲವಾದಲ್ಲಿ ವಿಮಾನ ನಿಲ್ದಾಣದ ಮುಂಭಾಗ ಸಂತ್ರಸ್ತ ರೈತರು, ಪಕ್ಷದ ಮುಖಂಡರು ಹಾಗೂ ನಾಡಿನ ಹಿರಿಯ ರೈತ ಮುಖಂಡರನ್ನು ಒಳಗೊಂಡಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ ಆರ್. ವಿಜಯ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Wrestling Federation of India ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವುದು ಯಾಕೆ? ಅವರ ಆರೋಪಗಳೇನು; ಏನಿದು ಪ್ರಕರಣ?
ಅವರು ಶುಕ್ರವಾರ (ಜ.೨೦) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನಿವೇಶನ ನೀಡುವಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ನೋವಿನ ಸಂಗತಿ. 2007ರಲ್ಲಿ ಅಂದಿನ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿವಮೊಗ್ಗ ತಾಲೂಕು ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ರೈತರ ಮನವೊಲಿಸಿ, ಸಂತ್ರಸ್ತರಿಗೆ ನಿವೇಶನ, ಉದ್ಯೋಗ ನೀಡುವುದಾಗಿ ತಿಳಿಸಿ ವಿಮಾನ ನಿಲ್ದಾಣಕ್ಕಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದರು. ಆದರೆ, 15 ವರ್ಷಗಳೇ ಕಳೆದರೂ ಈವರೆಗೂ ಸಂತ್ರಸ್ತರಿಗೆ ನಿವೇಶನ ನೀಡಿಲ್ಲ. ತಾವು ರೈತರ ಪರವಾಗಿದ್ದೇವೆ ಎಂದು ಹೇಳುವ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರು ತಮ್ಮ ತವರು ಜಿಲ್ಲೆಯಲ್ಲಿ ಸಂತ್ರಸ್ತ ರೈತರ ನೆರವಿಗೆ ಧಾವಿಸದಿರುವುದು ವಿಷಾದನೀಯ. ಅಲ್ಲದೇ ಭೂಮಿ ಕಳೆದುಕೊಂಡ ಸಂತ್ರಸ್ತರು ಈ ಹಿಂದೆ ವಿಮಾನ ನಿಲ್ದಾಣದ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದ್ದಾಗ ಶಿವಮೊಗ್ಗ ಗ್ರಾಮಾಂತರ ಶಾಸಕರು ಸ್ಥಳಕ್ಕೆ ಆಗಮಿಸಿ, ಇನ್ನೂ 20 ದಿನದೊಳಗೆ ನಿವೇಶನ ನೀಡುವುದಾಗಿಯೂ, ಇಲ್ಲದಿದ್ದರೆ ಸಂತ್ರಸ್ತರೊಂದಿಗೆ ತಾವೂ ಪ್ರತಿಭಟನೆಯಲ್ಲಿ ಪಾಲ್ಗೊಳುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಶಾಸಕರು ಇಲ್ಲಿಯವರೆಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ | Actress Abhinaya | `ಹಿಟ್ಲರ್ ಕಲ್ಯಾಣ’ ಧಾರವಾಹಿಯ ಅಭಿನಯಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ!
ಸೋಗಾನೆಯ ವಿನಾಯಕ ನಗರದಲ್ಲಿ 51 ಜನ ಬಗರ್ ಹುಕುಂ ಸಾಗುವಳಿದಾರರಿಗೆ ಶಾಸಕರು ಮತ್ತು ತಹಸೀಲ್ದಾರ್ 07/09/2022 ರಂದು ಸಾಗುವಳಿ ಚೀಟಿ ವಿತರಿಸಿದ್ದರು. ಆದರೆ, ಈವರೆಗೆ ಪಹಣಿ ಏರಿಸಿಲ್ಲ. ಪಹಣಿ ಏರಿಸುವುದಿರಲಿ, ಸಾಗುವಳಿ ಚೀಟಿ ನೀಡಿದ ಕೆಲವೇ ದಿನಗಳಲ್ಲಿ ನಿಮ್ಮ ಸಾಗುವಳಿ ಚೀಟಿ’ ವಜಾ ಮಾಡಲಾಗುವುದು ಎಂದು ನೋಟಿಸ್ ಕಳುಹಿಸಿದ್ದಾರೆ. ರೈತರನ್ನು ಬೀದಿಗೆ ತಳ್ಳಿ ಇದೀಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಮುಂದಾಗಿರುವುದು ಖಂಡನೀಯ ಎಂದು ವಿಜಯಕುಮಾರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಗ್ರಾಪಂ ಸದಸ್ಯ ಅನಿಲ್ ಸಾಗರ, ಅರುಣ್ ನಾಯ್ಡು, ಪುಟ್ಟರಾಜು, ಪ್ರಭಾಕರ ಮತ್ತಿತರರು ಇದ್ದರು.
ಇದನ್ನೂ ಓದಿ | PM Narendra Modi | ಲಕ್ಸೆಂಬರ್ಗ್ ಪ್ರಧಾನಿಯೂ ಮೋದಿ ಭಕ್ತರಂತೆ! ಶಿಂಧೆ ಜತೆ ಮೋದಿ ಬಗ್ಗೆ ಚರ್ಚೆ ನಡೆಸಿದ ಜಾಗತಿಕ ಗಣ್ಯರು