ತೀರ್ಥಹಳ್ಳಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಮತ್ತು ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ ಪ್ರಕರಣದ (Shivamogga terror) ಆರೋಪಿ ಶಾರೀಕ್ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಅವರು ತೀರ್ಥಹಳ್ಳಿಯಲ್ಲಿರುವ ಕಾಂಗ್ರೆಸ್ ಕಚೇರಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಧವಾರ ಬೆಳಗ್ಗೆ ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿರುವ ಶಾರೀಕ್ ಮನೆ ಮೇಲೆ ಬೆಳಗ್ಗೆ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಶಾರೀಕ್ ಕುಟುಂಬದ ಹಣಕಾಸು ವ್ಯವಹಾರ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು ವ್ಯವಹಾರಗಳು ಕುರಿತು ಮನೆಯವರಿಂದ ಮಾಹಿತಿ ಪಡೆದರು ಎಂದು ತಿಳಿದು ಬಂದಿದೆ.
ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ ಹಿನ್ನೆಲೆಯಲ್ಲಿ ಸೊಪ್ಪುಗುಡ್ಡೆಯಲ್ಲಿರುವ ಶಾರೀಕ್ ಮನೆ ಬಳಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶಂಕಿತ ಉಗ್ರ ಮಾಜ್ ಮುನೀರ್ ಮನೆಯಲ್ಲೂ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಅಕ್ಕಪಕ್ಕದ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.
5 ಕಾರಿನಲ್ಲಿ ಬಂದಿರುವ 15ಕ್ಕೂ ಹೆಚ್ಚು ಅಧಿಕಾರಿಗಳು ಪ್ರತಿ ಮನೆಗೆ ತೆರಳಿ ಮೊಬೈಲ್ ಸ್ವಿಚ್ ಆಫ್ ಗೆ ಸೂಚನೆ ನೀಡಲಾಗಿದೆ. ಯಾರೂ ಪೋಟೋ ತೆಗೆಯದಂತೆ ತಂಡ ಸೂಚನೆ ನೀಡಿದೆ. ಬೇರೆಡೆಯಿಂದ ಶಸ್ತ್ರಸಜ್ಜಿತ ಪೊಲೀಸರನ್ನು ಇ.ಡಿ ಅಧಿಕಾರಿಗಳು ಕರೆತಂದಿದ್ದರು.
ಕಾಂಗ್ರೆಸ್ ಕಚೇರಿಯಲ್ಲೂ ಪರಿಶೀಲನೆ
ಇದೇ ವೇಳೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಹಳೆ ಕಚೇರಿ ವಿಷಯ ಸಂಬಂಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಪಕ್ಷದ ಮುಖಂಡರನ್ನು ಪ್ರಶ್ನಿಸಿ, ದಾಖಲೆಗಳನ್ನು ಪರಿಶೀಲಿಸಿದರು.
ಹಾಸಿಮ್ ಎಂಬುವವರ ಹೆಸರಿನಲ್ಲಿದ್ದ ಜಾಗವನ್ನು ಗುತ್ತಿಗೆಗೆ ಪಡೆದು ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ಕಚೇರಿ ಸ್ಥಾಪಿಸಲಾಗಿತ್ತು. ನೂತನ ಕಚೇರಿ ಸ್ಥಾಪನೆಯಾದ ಬಳಿಕ ಜಾಗ ತೆರವು ಮಾಡಿಕೊಡಲಾಗಿತ್ತು. ಈ ಹಾಸಿಮ್ ಎನ್ನುವವರು ಶಾರಿಕ್‌ನ ಅಜ್ಜ ಎಂದು ತಿಳಿದುಬಂದಿದೆ.
ಕಿಮ್ಮನೆ ರತ್ನಾಕರ್ ವಿವರಣೆ
ಇ.ಡಿ ಅಧಿಕಾರಿಗಳು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದರು. ಕಚೇರಿ ಕಟ್ಟಡ ಬಾಡಿಗೆ ಪಡೆದಿರುವ ಬಗ್ಗೆ ಪ್ರಶ್ನಿಸಿದ್ದರು. ಯಾರಿಗೆ ಬಾಡಿಗೆ ಕಟ್ಟುತ್ತಿದ್ದಿರಿ ಎಂದು ಕೇಳಿದರು. ಅದಕ್ಕೆ ಸರಿಯಾದ ಉತ್ತರ ಕೊಟ್ಟಿದ್ದೇವೆ ಎಂದು ಬಳಿಕ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | Shivamogga terror | ತೀರ್ಥಹಳ್ಳಿಯಲ್ಲಿ ಇ.ಡಿ ದಾಳಿ: ಮೂವರು ಶಂಕಿತ ಉಗ್ರರ ಮನೆಯಲ್ಲಿ ಶೋಧ ಕಾರ್ಯಾಚರಣೆ