Site icon Vistara News

ಆನಂದಪುರದಲ್ಲಿ ಸಾಂಪ್ರದಾಯಿಕ ಮೀನು ಶಿಕಾರಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರದ ಆನಂದಪುರಲ್ಲಿರುವ ಚನ್ನಶೆಟ್ಟಿಕೊಪ್ಪ ಗ್ರಾಮದ ಚನ್ನಮ್ಮಾಜಿ ಕೆರೆಯಲ್ಲಿ ʼಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿʼಗೆ ಚಾಲನೆ ನೀಡಲಾಗಿದೆ. ಈ ಪ್ರಾಂತ್ಯದ ಮೀನುಗಾರರು ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣದಿಂದ ಈ ಸಂಭ್ರಮಾಚರಣೆಯಿಂದ ವಂಚಿತರಾಗಿದ್ದರು. ಹಾಗಾಗಿ ಈ ವರ್ಷ ನಡೆಯುತ್ತಿರುವ ಮೀನು ಶಿಕಾರಿ ಕಾರ್ಯಕ್ರಮ ಮಹತ್ವದ ಸಂಭ್ರಮಕ್ಕೆ ಕಾರಣವಾಗಿದೆ.

ಪ್ರತಿಯೊಂದು ಹಬ್ಬ ಹರಿದಿನಗಳನ್ನು ವಿಶಿಷ್ಟವಾಗಿ ಆಚರಿಸುವ ಮಲೆನಾಡಿನಲ್ಲಿ ʼಮೀನು ಶಿಕಾರಿʼ ಕೂಡ ವಿಶೇಷವಾದ ಸಂಪ್ರದಾಯಿಕ ಆಚರಣೆಯಾಗಿದೆ.

ಬೇಸಿಗೆ ಶುರುವಾಗುವ ಮುನ್ನವೇ ಕೆರೆಯಲ್ಲಿ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ನಂತರ ಬೇಸಿಗೆಯಲ್ಲಿ ಗ್ರಾಮದ ಜನರು ಸೇರಿ ಮೀನು ಶಿಕಾರಿ ಮಾಡುತ್ತಾರೆ. ಪ್ರತಿ ವರ್ಷ ಬೇಸಿಗೆಯಲ್ಲಿ ಈ ಕಾರ್ಯಕ್ರಮ ಜರುಗುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಈ ಕಾರ್ಯಕ್ರಮ ನಡೆದಿರಲಿಲ್ಲ. ಎರಡು ವರ್ಷಗಳ ಮುನ್ನವೇ ಕೆರೆಯಲ್ಲಿ ಮೀನಿನ ಮರಿಗಳನ್ನು ಬಿಡಲಾಗಿತ್ತು ಆದರೆ ಶಿಕಾರಿ ಮಾಡಲು ಆಗಿರಲಿಲ್ಲ.

ಈ ಅಪರೂಪದ ಮೀನು ಶಿಕಾರಿಗೆ ಸುಮಾರು 1,000ದಿಂದ 1,500 ಜನ ಭಾಗವಹಿಸಿ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಚೆಂದಗಾಣಿಸಿದರು. ಎರಡು ವರ್ಷಗಳಿಂದ ನೋಡಲಾಗದಿದ್ದ ಈ ಕಾರ್ಯಕ್ರಮಕ್ಕೆ ಸುಮಾರು 5 ರಿಂದ 6 ಸಾವಿರ ಸಂಖ್ಯೆಯಲ್ಲಿ ಜನ ಸೇರಿದ್ದರು. ಶಿಕಾರಿಯಲ್ಲಿ ಪಾಲ್ಗೊಂಡು ಸಂತಸಪಟ್ಟರು.

ಬೇಸಿಗೆ ಆರಂಭವಾಗಿ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಈ ಸಾಂಪ್ರದಾಯಿಕ ಮೀನು ಶಿಕಾರಿ ಆರಂಭವಾಗುತ್ತದೆ. ಕೆರೆಯಲ್ಲಿ ಮೀನುಗಳನ್ನು ಬೇಟೆಯಾಡಲು ಗ್ರಾಮದ ಮುಖ್ಯಸ್ಥರು ಸೇರಿ ಬೇಸಿಗೆ ಸಮಯದಲ್ಲಿ ದಿನವನ್ನು ನಿಗದಿ ಮಾಡುತ್ತಾರೆ. ಅಂದು ಗ್ರಾಮಸ್ಥರು ಮಂಕರಿ, ಕುಣಿಯನ್ನು ಉಪಯೋಗಿಸಿ ಮೀನು ಹಿಡಿಯುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.

ಹೆಚ್ಚಿನ ಓದಿಗಾಗಿ: ಬೆಂಗಳೂರು ಕರಗ

Exit mobile version