Site icon Vistara News

Karnataka Election 2023: ಉತ್ತಮ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ: ಕೆ. ದಿವಾಕರ್

#image_title

ರಿಪ್ಪನ್‌ಪೇಟೆ: ರಾಜ್ಯದ ಅಭಿವೃದ್ಧಿಗೆ ಹಾಗೂ ಉತ್ತಮ ಆಡಳಿತಕ್ಕಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕೆಂದು ಸಾಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ನಿಯೋಜಿತ ಅಭ್ಯರ್ಥಿ ಹಾಗೂ ಹಿರಿಯ ವಕೀಲ ಕೆ.ದಿವಾಕರ್ ಹೇಳಿದರು.

ಪಟ್ಟಣದ ಆಮ್ ಆದ್ಮಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಮ್ ಆದ್ಮಿ ಪಕ್ಷವು ಯಾವಾಗಲೂ ಜನಪರ ಹಾಗೂ ಅಭಿವೃದ್ಧಿ ಪರವಾಗಿದ್ದು, ಉತ್ತಮ ಆಡಳಿತವನ್ನು ನೀಡುವುದರ ಮೂಲಕ ದೇಶದ ಹಾಗೂ ರಾಜ್ಯದ ಪ್ರಗತಿಗಾಗಿ ದುಡಿಯಲಿದೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಬೆಂಬಲಿಸಬೇಕು” ಎಂದು ಕೋರಿದರು.

ಇದನ್ನೂ ಓದಿ: Karnataka Elections : ಎಂಎಲ್ಸಿ ಸ್ಥಾನಕ್ಕೆ ಆಯನೂರು ಮಂಜುನಾಥ್‌ ರಾಜೀನಾಮೆ, ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧೆ ಖಚಿತ

“ಮತದಾರರು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ತೊರೆದು ಆಮ್ ಆದ್ಮಿ ಪಕ್ಷದತ್ತ ಒಲವನ್ನು ತೋರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದಲ್ಲಿ ಹೇಗೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರದೇ ಪಕ್ಷದ ಹಿರಿಯ ಮುಖಂಡರು ಹೇಳುತ್ತಿದ್ದಾರೆ. ಈಗಾಗಲೇ ಕೆಲವು ಹಿರಿಯ ಮುಖಂಡರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ದೆಹಲಿ ಹಾಗೂ ಪಂಜಾಬಿನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಆ ರಾಜ್ಯಗಳ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಬಾರಿ ಕರ್ನಾಟಕದ ಜನತೆ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸರಿಯಾಗಿ ಪಾಠ ಕಲಿಸಲಿದ್ದಾರೆ” ಎಂದು ಅವರು ಹೇಳಿದರು.

ರಾಜ್ಯದ ಬಿಜೆಪಿ ಪಕ್ಷದ ಹಿರಿಯ ರಾಜಕಾರಣಿ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಅವರದ್ದೇ ಪಕ್ಷದವರು ಚುನಾವಣಾ ಸಂದರ್ಭದಲ್ಲಿ ಶಿವಮೊಗ್ಗ ನಗರದಲ್ಲಿ ಕೋಮುಗಲಭೆಯನ್ನು ನಡೆಸಲು ಸಂಚನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಇದರಿಂದ ಅಮಾಯಕರು ಬಲಿಪಶುಗಳಾಗುವುದರ ಜತೆಗೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗ ತತ್‌ಕ್ಷಣದಿಂದ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಮಿಲಿಟರಿ ಪಡೆಯನ್ನು ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ನಿಯೋಜಿಸಬೇಕು. ಆಯನೂರು ಮಂಜುನಾಥ್‌ ಅವರ ಆಪಾದನೆಯನ್ನು ಚುನಾವಣಾ ಆಯೋಗ ಕಡೆಗಣಿಸದೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ದಿವಾಕರ್‌ ಒತ್ತಾಯಿಸಿದರು.

ಇದನ್ನೂ ಓದಿ: S. Jaishankar: ಉಚಿತ ಕೊಡುಗೆಗಳು ಬೇಜವಾಬ್ದಾರಿ ಪ್ರಚಾರ ತಂತ್ರ: ಆಮ್‌ ಆದ್ಮಿ, ಕಾಂಗ್ರೆಸ್‌ ವಿರುದ್ಧ ಎಸ್‌. ಜೈಶಂಕರ್‌ ವಾಗ್ದಾಳಿ

ಪತ್ರಿಕಾಗೋಷ್ಠಿಯಲ್ಲಿ ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಗಣೇಶ್ ಸೂಗೂಡು, ಆಶ್ರಿತಾ ಸಂತೋಷ್, ಉಮೇಶ್, ಈಶ್ವರಪ್ಪ ಇನ್ನಿತರರಿದ್ದರು.

Exit mobile version