ಸೊರಬ: ಸಹಕಾರ ಸಂಘದಲ್ಲಿನ ಷೇರುದಾರರು ಒಂದು ಕುಟುಂಬದಂತೆ (Family) ಒಗ್ಗಟ್ಟಿನಿಂದ ಮುನ್ನೆಡೆದಾಗ ಮಾತ್ರ ಸಂಘಗಳು ಬೆಳವಣಿಗೆ (Growth) ಹೊಂದಲು ಸಾಧ್ಯವಾಗುತ್ತದೆ ಎಂದು ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಶ್ರೀ ರಾಮಪ್ಪ ಹೊಳೆಕೊಪ್ಪ ತಿಳಿಸಿದರು.
ತಾಲೂಕಿನ ಹೊಳೆಕೊಪ್ಪ ಗ್ರಾಮದ ಶ್ರೀ ಧನಾಂಜನೇಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಷೇರುದಾರರು ಸಹಕಾರ ಸಂಘಗಳಲ್ಲಿ ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಸಕಾಲಕ್ಕೆ ಮರುಪಾವತಿ ಮಾಡಿದರೆ ಸಂಘಗಳು ಉನ್ನತಿ ಹೊಂದಲು ಸಾಧ್ಯವಾಗುತ್ತದೆ. ಸಹಕಾರ ಸಂಘದಲ್ಲಿ ಸದಸ್ಯರ ಉತ್ತಮ ವಹಿವಾಟಿನಿಂದ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಪಥದತ್ತ ಸಾಗುತ್ತಾ ಲಾಭದಲ್ಲಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಮಳಲಗದ್ದೆ ಸಹಕಾರ ಸಂಘ ಮಾದರಿಯಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಳ್ಳಲು ಸದಸ್ಯರು ಕೈ ಜೋಡಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Cricket News : ಚಿನ್ನದ ಪದಕ ಗೆದ್ದ ಕ್ರಿಕೆಟ್ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಆರ್. ಅಶೋಕ್ ಹೆಗಡೆ ಮಾತನಾಡಿ, ರೈತರಿಗೆ ಸ್ಪಂದಿಸಿ ಅಗತ್ಯ ಸೌಲಭ್ಯ ಮತ್ತು ಸಹಕಾರವನ್ನು ಒದಗಿಸುವುದೇ ಸಂಘದ ಪ್ರಮುಖ ಧ್ಯೇಯವಾಗಿದ್ದು, ಸಂಘದಲ್ಲಿ 1296 ಸದಸ್ಯರನ್ನು ಹೊಂದಿದೆ. 2022-23ನೇ ಸಾಲಿನಲ್ಲಿ ಸಂಘವು 15 ಲಕ್ಷ ರೂ., ನಿವ್ವಳ ಲಾಭಗಳಿಸಿದೆ. ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿ ಮಾಡಿದರೆ ಮತ್ತಷ್ಟು ಸದಸ್ಯರಿಗೆ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ರೈತರಿಗೆ ಮುಂದಿನ ದಿನಗಳಲ್ಲಿ ಸಂಘದಿಂದ ಹೆಚ್ಚಿನ ಸಾಲ ಸೌಲಭ್ಯ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಮಳಲಗದ್ದೆಯ ಗ್ರಾಪಂ ಕಟ್ಟಡವನ್ನು ಸಂಘಕ್ಕೆ ಪಡೆಯಲಾಗಿದ್ದು, ರೈತರಿಗೆ ಅನುಕೂಲವಾಗುವ ರಸಗೊಬ್ಬರ ಮತ್ತು ಕೀಟನಾಶಕ ಹಾಗೂ ಕೃಷಿ ಉಪಕರಣಗಳ ಮಾರಾಟ ಮಾಡುವ ಯೋಜನೆ ರೂಪಿಸಿಸಲಾಗಿದೆ. ರೈತರಿಗೆ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳ ಮೂಲಕ ಹತ್ತು ಕೋಟಿ ರೂ., ಸಾಲ ನೀಡುವ ಗುರಿ ಹೊಂದಲಾಗಿದೆ. ಸಂಘದಲ್ಲಿ ರೈತರಿಗೆ ಆರ್‌ಟಿಸಿ ಪಡೆಯಲು, ಬೆಳೆ ವಿಮೆ ಮಾಡಿಸಲು, ಯಶಸ್ವಿ ಯೋಜನೆಯಲ್ಲಿ ನೋಂದಾಯಿಸಲು ಅನುಕೂಲ ಕಲ್ಪಿಸಲಾಗಿದೆ. ರೈತರು ತಮ್ಮ ಜಮೀನುಗಳ ಖಾತೆಗೆ ಆಧಾರ್ ಮತ್ತು ಬ್ಯಾಂಕ್ ಖಾತೆಯನ್ನು ಜೋಡಿಸಿದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ. ವಿನಯ್ ವಾರ್ಷಿಕ ವರದಿ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಸಂಘದಿಂದ ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: World Heart Day: ಈ ಸಂಗತಿಗಳನ್ನು ಪಾಲಿಸಿದರೆ ಹೃದಯಾಘಾತದ ರಿಸ್ಕೇ ಇಲ್ಲ!
ಸಂಘದ ಉಪಾಧ್ಯಕ್ಷ ಕೆ.ಎಂ. ಗಣಪತಿ, ನಿರ್ದೇಶಕರಾದ ಕೆ. ಕೀರ್ತಿರಾಜ ಕಾನಳ್ಳಿ, ಕೆ. ಪರಶುರಾಮ ಕೋಳಿಸಾಲು, ಬಿ. ರಾಮಪ್ಪ, ನಾಗಾರ್ಜುನ, ವೀರಭದ್ರಗೌಡ, ಸತ್ಯಪ್ಪ, ಕ್ಷೇತ್ರಾಧಿಕಾರಿ ಎಂ.ಬಿ. ಶರಣಪ್ಪ ಸೇರಿದಂತೆ ಇತರರಿದ್ದರು.