ಶಿವಮೊಗ್ಗ: ಆಲ್ಕೊಳ ಸರ್ಕಲ್‌ನಲ್ಲಿ ಆಟೋ ಚಾಲಕರೊಬ್ಬರ ಸಮಯಪ್ರಜ್ಞೆಯಿಂದಾಗಿ ಮಗುವಿನ ಪ್ರಾಣ ಉಳಿದಿದೆ. ಕಳೆದ ರಾತ್ರಿ ಘಟನೆ ಸಂಭವಿಸಿದೆ. ತಾಯಿ ಮತ್ತು ಮೂರು ವರ್ಷದ ಮಗು ಖಾಸಗಿ ಬಸ್ಸಿನಲ್ಲಿ ಆಗಮಿಸಿದ್ದಾರೆ. ಆಲ್ಕೊಳ ಸರ್ಕಲ್’ನಲ್ಲಿ ಬಸ್ಸಿನಿಂದ ಇಳಿದಿದ್ದಾರೆ. ಮಗುವನ್ನು ಬಸ್ಸಿನಿಂದ ಇಳಿಸಿ ಲಗೇಜ್ ಕೆಳಗಿಳಿಸಿ ಪಕ್ಕಕ್ಕಿಡಲು ಮಹಿಳೆ ಮುಂದಾಗಿದ್ದಾರೆ. ಈ ಸಮಯದಲ್ಲಿ, ಅಯ್ಯಂಗಾರ್ ಬೇಕರಿ ಸಮೀಪ ರಸ್ತೆಯ ಪಕ್ಕದಲ್ಲಿ ತೋಡಲಾಗಿದ್ದ ಗುಂಡಿಯನ್ನು ಗಮನಿಸಿಲ್ಲ. ಮಳೆ ಬಂದು ನೀರು ತುಂಬಿಕೊಂಡಿದ್ದ ಗುಂಡಿಯೊಳಗೆ ಮಗು ಬಿದ್ದಿದೆ. ತಕ್ಷಣವೇ ಇದನ್ನು ನೋಡಿದ ಆಟೊ ಚಾಲಕ ಲೋಕೇಶ್, ಮಗುವನ್ನು ರಕ್ಷಣೆ ಮಾಡಿದ್ದಾರೆ. ಆಟೋ ಚಾಲಕ ಲೋಕೇಶ್ ಅವರ ಸಮಯ ಪ್ರಜ್ಞೆ ದುರ್ಘಟನೆ ತಪ್ಪಿಸಿದೆ.
ಇದನ್ನೂ ಓದಿ: ರಥೋತ್ಸವ ವೇಳೆ ವಿದ್ಯುತ್ ತಗುಲಿ ಮಕ್ಕಳೂ ಸೇರಿ 11 ಮಂದಿ ಸಾವು: ತಂಜಾವೂರಿನಲ್ಲಿ ದುರ್ಘಟನೆ
ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಈ ಗುಂಡಿ ತೆಗೆದಿರಬಹುದು ಎಂದು ಸ್ಥಳೀಯರು ಮತ್ತು ಆಟೋ ಚಾಲಕರು ತಿಳಿಸಿದ್ದಾರೆ. ಘಟನೆ ಕುರಿತು ಕಳೆದ ರಾತ್ರಿಯೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರ ತಿಳಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಠಾಣೆ ಇನ್ಸ್ ಪೆಕ್ಟರ್ ದೀಪಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ವೇಳೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಫಲಕ, ಸುರಕ್ಷತಾ ಬ್ಯಾರಿಕೇಡ್‌ಗಳನ್ನು ಅಳವಡಿಸದ ಸಂಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.