ಶಿವಮೊಗ್ಗ: “ದಾನದಿಂದ ಸಿಗುವ ತೃಪ್ತಿಭಾವ ಮತ್ತೆಲ್ಲೂ ಸಿಗುವುದಿಲ್ಲ. ಜೀವ ಉಳಿಸುವ ಶ್ರೇಷ್ಠ ಕಾಯಕ ರಕ್ತದಾನ ಆಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು” ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಸ್ವಾಮೀಜಿ ಅವರು ವಿಶ್ವಗುರು ಬಸವ ಜಯಂತಿ (Basava Jayanti) ಪ್ರಯುಕ್ತ ಶಿವಮೊಗ್ಗ ನಗರದ ಬಸವ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತಾಮೃತ ದಾಸೋಹ ಕಾರ್ಯಕ್ರಮಕ್ಕೆ ಸ್ವತಃ ತಾವು ಕೂಡ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
“ನಾವು ಮಾಡುವ ರಕ್ತದಾನದಿಂದ ತುರ್ತು ಸಂದರ್ಭದಲ್ಲಿ ಇರುವ ಮೂರ್ನಾಲ್ಕು ಜನರಿಗೆ ಅನುಕೂಲ ಆಗುತ್ತದೆ. ಮತ್ತೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ನೆರವಾಗುತ್ತದೆ. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವೂ ಚೆನ್ನಾಗಿರಲು ಸಹಕಾರಿ ಆಗುತ್ತದೆ. ಸದಾ ಲವಲವಿಕೆಯಿಂದ ಸಾಧ್ಯವಾಗುತ್ತದೆ. ರಕ್ತದಾನ ಬಗ್ಗೆ ಅನೇಕರಲ್ಲಿ ಭಯ ಇದ್ದು, ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆರೋಗ್ಯವಂತ ಯುವಜನರು ವೈದ್ಯರ ಮಾರ್ಗದರ್ಶನದಲ್ಲಿ ರಕ್ತದಾನ ಮಾಡಬಹುದಾಗಿದೆ. ರಕ್ತದ ಕೊರತೆ ಇದ್ದು, ಹೆಚ್ಚು ಹೆಚ್ಚು ರಕ್ತದಾನ ಶಿಬಿರಗಳು ಆಯೋಜನೆ ಆಗಬೇಕು. ಇದರಿಂದ ರಕ್ತದ ಬೇಡಿಕೆಯನ್ನು ಪೂರೈಸಬಹುದು” ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಘಟಕ ಪದಾಧಿಕಾರಿಗಳು, ಬಸವ ಕೇಂದ್ರದ ಭಕ್ತರು, ವಿವಿಧ ಸಂಘಟನೆ ಸದಸ್ಯರು ರಕ್ತದಾನ ಮಾಡಿದರು. ವಿಶ್ವಗುರು ಬಸವಣ್ಣರಿಗೆ ಪೂಜೆ, ಅಂಬಲಿ ದಾಸೋಹ ನಡೆಯಿತು. ವಿಶ್ವ ಗುರು ಬಸವಣ್ಣ ಹಾಗೂ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ಬಸವ ಕೇಂದ್ರದ ವೆಂಕಟೇಶ ನಗರದ ಅನಕೃ ರಸ್ತೆ ಹಾಗೂ ವಿವಿಧ ಬಡಾವಣೆಗಳಲ್ಲಿ ನಡೆಯಿತು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರ, ಎಚ್.ಸಿ. ಯೋಗೀಶ್, ಎಸ್.ಪಿ. ದಿನೇಶ್, ರುದ್ರಮುನಿ ಸಜ್ಜನ್, ಬಸವ ಕೇಂದ್ರದ ಅಧ್ಯಕ್ಷ ಡಿ.ಜಿ. ಬೆನಕಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ. ವಿಜಯ್‌ಕುಮಾರ್, ನಾಗರಾಜ ಕಂಕಾರಿ, ಮಲ್ಲಿಕಾರ್ಜುನ ಕಾನೂರು, ಡಿ.ನಾಗರಾಜ, ಶಿವಕುಮಾರ, ಧೃವಕುಮಾರ, ಮಹೇಶಮೂರ್ತಿ, ಮಹಾರುದ್ರ, ಬಾರಂದೂರು ಪ್ರಕಾಶ, ಶಿವಯೋಗಿ ಹಂಚಿನಮನೆ ಉಪಸ್ಥಿತರಿದ್ದರು.