Site icon Vistara News

Bull Festival | ಮೈನವಿರೇಳಿಸಿದ ಹೋರಿ ಹಬ್ಬ: ಇಂಡಿಹಳ್ಳಿ ಗ್ರಾಮದಲ್ಲಿ ಹೋರಿಗಳ ಪವರ್‌, ಯುವಕರ ಖದರ್‌ ಪ್ರದರ್ಶನ

Bull Festival Indihalli Village Folk sports

ಸೊರಬ: ಮಲೆನಾಡು ಹಾಗೂ ಬಯಲುಸೀಮೆ ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ, ರಾಜ್ಯ ಮಟ್ಟದ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ (Bull Festival) ತಾಲೂಕಿನ ಇಂಡಿಹಳ್ಳಿ ಗ್ರಾಮದಲ್ಲಿ ಭಾನುವಾರ (ಡಿ.೧೧) ಜರುಗಿತು.

ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವವನ್ನು ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು, ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಹೋರಿ ಪ್ರಿಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.


ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ಗಾಂಧಿನಗರ ನಾಯಕರ ಹುಲಿ, ಮಂಗಳೂರು ಮಲೆನಾಡು ಬಸವ, ಮರೂರು ತಾರಕಾಸುರ, ಸೆವೆನ್ ಸ್ಟಾರ್, ಕೊಡಕಣಿ ಡಾನ್, ಚಿಕ್ಕಾವಲಿ ನಾಗ, ಆ್ಯಕ್ಷನ್ ಸ್ಟಾರ್ ಅಭಿಮನ್ಯು, ನರಸಾಪುರ ಕಿಂಗ್, ಹಾನಗಲ್ಲ ರಾಜಕುಮಾರ, ಚಿಟ್ಟೂರು ಆರ್ಮಿ ಹುಲಿ, ಚುರ್ಚಿಗುಂಡಿ ಸೃಷ್ಟಿಕರ್ತ, ವರಹ ವಜ್ರಮುನಿ, ಶಿಕಾರಿಪುರ್ ಕಾ ರಾಜ, ಕೊರಟಿಕೆರೆ ಗೆಳೆಯ, ಕೊರಟಿಕೆರೆ ದೊರೆ, ಇಂಡಿಹಳ್ಳಿಯ ಗರುಡ, ಸರದಾರ, ಬ್ರಹ್ಮಾಸ್ತ್ರ, ಕರ್ಣ, ಏಕಾಂಗಿ, ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು.

ಹೋರಿ ಹಬ್ಬದ ಆಯೋಜಿಸಿದ್ದ ಸಿದ್ದರಾಮೇಶ್ವರ ಗ್ರಾಮಾಭಿವೃದ್ಧಿ ಸಮಿತಿಯವರು ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.

ಇದನ್ನೂ ಓದಿ | Buffalo race | ಕಂಬಳ, ಜಲ್ಲಿಕಟ್ಟುವಿಗೆ ಅವಕಾಶ ನೀಡಿದ ಆದೇಶ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆ ಪೂರ್ಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ

Exit mobile version