Site icon Vistara News

Congress Protest | ಬ್ಯಾರೀಸ್ ಮಾಲ್‌ ಗುತ್ತಿಗೆ ಅವಧಿ ಪ್ರಕರಣದ ತನಿಖಾ ವರದಿ ಬಹಿರಂಗಪಡಿಸಿ: ಕಾಂಗ್ರೆಸ್‌ ಪ್ರತಿಭಟನೆ

Congress Protest

ಶಿವಮೊಗ್ಗ: ನಗರದ ಶಿವಪ್ಪ ನಾಯಕ ಮಾರ್ಕೆಟ್‌ (ಬ್ಯಾರೀಸ್ ಸಿಟಿ ಸೆಂಟರ್ ಮಾಲ್‌) 99 ವರ್ಷಗಳ ಗುತ್ತಿಗೆ ಅವಧಿ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿ ಬಹಿರಂಗಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮಹಾನಗರ ಪಾಲಿಕೆಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ (Congress Protest) ನಡೆಸಿದರು.

ಬಿಜೆಪಿ ಆಡಳಿತವಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಅಡಳಿತ ವ್ಯವಸ್ಥೆ ವಿರುದ್ಧ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ತನಿಖಾ ವರದಿ ಬಂದು 5 ತಿಂಗಳಾದರೂ ಅದನ್ನು ಬಹಿರಂಗಗೊಳಿಸಿಲ್ಲ, ಈ ಪ್ರಕರಣದಲ್ಲೂ ಬಿಜೆಪಿ ಮುಖಂಡರು 40 ಪರ್ಸೆಂಟ್ ಕಮಿಷನ್ ತಿಂದಿದ್ದಾರೆಂದು ಆರೋಪಿಸಿದರು.

ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೇಯರ್ ಆಗಲೀ, ಆಯುಕ್ತರಾಗಲೀ ತನಿಖಾ ವರದಿಯನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ಇದರ ಹಿಂದಿರುವ ಮಹಾನಾಯಕ ಯಾರು ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಪ್ರಶ್ನಿಸಿದರು. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸದೆ, ಅನುಮತಿ ಪಡೆಯದೆ 99 ವರ್ಷಗಳ ಗುತ್ತಿಗೆ ನೀಡುವುದರ ಹಿಂದೆ ಮಾಜಿ ಸಚಿವ, ಸ್ಥಳೀಯ ಶಾಸಕ ಕೆ.ಎಸ್.ಈಶ್ವರ ಅವರ ಕೈವಾಡವಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.

ಇದನ್ನೂ ಓದಿ | Siddaramaiah | ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದಕ್ಕೆ ಬೇಸರವಿಲ್ಲ, ಜಾತ್ಯತೀತ ನಂಬಿಕೆಗೆ ಸಿಕ್ಕ ಪುರಸ್ಕಾರ ಎಂದು ಭಾವಿಸುವೆ ಎಂದ ಸಿದ್ದರಾಮಯ್ಯ

ಈ ಹಿಂದೆ, ಬ್ಯಾರೀಸ್ ಸಂಸ್ಥೆಯವರು ಗುತ್ತಿಗೆಗೆ ಸಂಬಂಧಿಸಿದಂತೆ ಬಾಡಿಗೆ ಆಧಾರದಲ್ಲಿ 99 ವರ್ಷಗಳ ಕಾಲ ಮುಂದುವರಿಸಲು ಅವಕಾಶ ಕೇಳಿಕೊಂಡಿದ್ದರು. ಸ್ಥಾಯಿ ಸಮಿತಿಯಲ್ಲಿ ಈ ವಿಷಯದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೂ ಕೂಡ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಈ ವಿಷಯ ಹೇಗೋ ಸೇರ್ಪಡೆಗೊಂಡು, ಸಭೆಯಲ್ಲಿ ಪ್ರತಿಪಕ್ಷದವರು ವಿರೋಧ ವ್ಯಕ್ತಪಡಿಸಿ ಸಾಕಷ್ಟು ಗೊಂದಲವೂ ಆಗಿದ್ದರಿಂದ ತನಿಖೆ ನಡೆಸಲು ತನಿಖಾ ಸಮಿತಿ ರಚಿಸಲಾಗಿತ್ತು. ಸಮಿತಿಯು ತನಿಖಾ ವರದಿಯನ್ನು ನೀಡಿ 5 ತಿಂಗಳಾದರೂ ಇದುವರೆಗೂ ಬಹಿರಂಗಪಡಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತನಿಖಾ ವರದಿಯಲ್ಲಿ ಆಡಳಿತ ಪಕ್ಷದ ಚುನಾಯಿತ ಪ್ರತಿನಿಧಿಗಳು, ಹಿಂದಿನ ಮೇಯರ್ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಹಾಗೂ ಇಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಆದ್ದರಿಂದ ಒಂದು ವಾರದೊಳಗಾಗಿ ತನಿಖಾ ವರದಿಯನ್ನು ಬಹಿರಂಗಪಡಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳ್ಳುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರು ಪಾಲಿಕೆಯ ಪ್ರವೇಶ ದ್ವಾರದ ಬಳಿ ಬರುತ್ತಿದ್ದಂತೆ ಪೊಲೀಸರು ಗೇಟ್ ಮುಚ್ಚಿ ತಡೆದರು. ಕೆಲ ಕಾಲ ಗೇಟ್ ಮುಂದೆ ಧರಣಿ ನಡೆಸಿದ ಪ್ರತಿಭಟನಾಕಾರರು ಗೇಟ್ ಹತ್ತಿ ಒಳನುಗ್ಗಲು ಪ್ರಯತ್ನಿಸಿದರು. ಅಂತಹವರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನಾಕಾರರನ್ನು ವಾಹನದಲ್ಲಿ ಕರೆದೊಯ್ದು, ನಂತರ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಪಕ್ಷದ ಪಾಲಿಕೆ ಸದಸ್ಯರು, ಇತರ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇದನ್ನೂ ಓದಿ | SCST Reservation | ಬಿಜೆಪಿ ಪ್ರಯತ್ನಕ್ಕೆ ಪರ್ಯಾಯ; ಜನವರಿ 8 ರಂದು ಕಾಂಗ್ರೆಸ್‌ನಿಂದ SCST ಐಕ್ಯತಾ ಸಮಾವೇಶ

Exit mobile version