Site icon Vistara News

ಅನಧಿಕೃತವಾಗಿ ಜಾನುವಾರುಗಳ ವಧೆ ಆಗದಂತೆ ಕ್ರಮ ವಹಿಸಲು ಡಿಸಿ ಸೂಚನೆ

ಶಿವಮೊಗ್ಗ: ಬಕ್ರೀದ್ ಹಬ್ಬದ ವೇಳೆ ಅನಧಿಕೃತವಾಗಿ ಪ್ರಾಣಿಗಳ ವಧೆ ಹಾಗೂ ಪ್ರಾಣಿ ಸಾಗಾಣಿಕೆ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಶನಿವಾರ ಸೂಚನೆ ನೀಡಿದರು.

ಬಕ್ರೀದ್ ಹಬ್ಬದ ದಿನಗಳಲ್ಲಿ ಅಕ್ರಮ ಒಂಟೆ, ಗೋವು ಹತ್ಯೆ ತಡೆಗಟ್ಟಲು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಕ್ರೀದ್ ವೇಳೆ ಕಾನೂನುಬಾಹಿರ ಜಾನುವಾರುಗಳ ವಧೆ ಮತ್ತು ಸಾಗಣಿಕೆ ಕಂಡು ಬಂದಲ್ಲಿ ಪಶುಪಾಲನಾ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ರಚಿಸಲಾಗಿರುವ ತಂಡ ಸೂಕ್ತ ಕ್ರಮ ವಹಿಸಬೇಕು. ಹಬ್ಬದ ವೇಳೆ ಸಾರ್ವಜನಿಕ ಕಸಾಯಿಖಾನೆಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಸೂಚನೆ ನೀಡಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಪಾಲಿಕೆ ವತಿಯಿಂದ ಹೆಚ್ಚುವರಿ ತಂಡ ರಚಿಸಬೇಕು. ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದರು.

ಗಲಭೆ, ದೊಂಬಿಗಳು ಉಂಟಾದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸಬೇಕು. ವಿಶೇಷ ತಂಡವು ಹಬ್ಬದ ಸಮಯದಲ್ಲಿ ನಿಗದಿಪಡಿಸಲಾದ ಸಮಯದವರೆಗೆ ಕರ್ತವ್ಯನಿರತರಾಗಿದ್ದು, ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಆಗದಂತೆ ನಿಗಾ ವಹಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ, ಆರ್‌ಟಿಒ ಮತ್ತು ಮಹಾನಗರಪಾಲಿಕೆಯು ಪೊಲೀಸ್ ಮತ್ತು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ತಂಡದಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ ಮಾತನಾಡಿ, ಯಾವುದೇ ರೀತಿಯ ಗಲಭೆ ಸಂಭವಿಸಿದರೆ ತಕ್ಷಣ ನಮಗೆ ತಿಳಿಸಬೇಕು. ತಾಲೂಕುಗಳು ಮತ್ತು ನಗರದಲ್ಲಿ ಹಬ್ಬದ ದಿನ ಗಸ್ತು ತಿರುಗಲು ಒಂದು ತಂಡ ರಚಿಸಬೇಕೆಂದು ಪೊಲೀಸ್‌ ಸಿಬ್ಬಂದಿಗೆ ತಿಳಿಸಿದರು.

ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಎಲಿ, ಪಾಲಿಕೆ ಪಶುವೈದ್ಯಾಧಿಕಾರಿ ಡಾ.ರೇಖಾ, ಆರ್‌ಟಿಒ ಅಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಇದನ್ನೂ ಓದಿ| Festival 2022| ಹಬ್ಬಗಳ ಸರಣಿಯ ಹೊಸ್ತಿಲು ಈ ಕಾರ ಹುಣ್ಣಿಮೆ ಹಬ್ಬ

Exit mobile version