ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್) ಕಾರ್ಖಾನೆಯಲ್ಲಿ ಇನ್ನೂ ಮಲಹೊರುವ ಪದ್ಧತಿ(ಮ್ಯಾನ್ಯುಯಲ್ ಸ್ಕ್ಯಾ ವೆಂಜಿಂಗ್) ಜಾರಿಯಲ್ಲಿರುವ ಬಗ್ಗೆ ದೂರುಗಳು ಬಂದಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮ್ಯಾನ್ಯುಯಲ್ ಸ್ಕಾವೆಂಜರ್ ವೃತ್ತಿ ನಿಷೇಧ, ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಇದನ್ನೂ ಓದಿ | ಗುಜರಾತ್ ಉಪ್ಪಿನ ಕಾರ್ಖಾನೆ ಗೋಡೆ ಕುಸಿತ; 12 ಮಂದಿ ಕಾರ್ಮಿಕರು ಸಾವು
ವಿಐಎಸ್ಎಲ್ ಕಾರ್ಖಾನೆಗಾಗಿ ಪ್ರತ್ಯೇಕವಾದ ಸಕ್ಕಿಂಗ್ ಯಂತ್ರ ಖರೀದಿಸಿ ಬಳಸಿಕೊಳ್ಳಬೇಕು. ಈಗಿನಂತೆಯೇ ಪುನರಾವರ್ತನೆಯಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ ಅವರು, ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಈವರೆಗೆ ಸಮೀಕ್ಷೆ ನಡೆಸದಿರುವ ಹಾಗೂ ಬಾಕಿ ಉಳಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಜೂನ್ ಮಾಸಾಂತ್ಯದೊಳಗಾಗಿ ಸಮೀಕ್ಷೆ ನಡೆಸಿ, ಕ್ರೋಡೀಕೃತ ವರದಿ ನೀಡುವಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಅಥವಾ ಇತರ ಸ್ಥಳಗಳಲ್ಲಿ ನೇರಪಾವತಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಗುತ್ತಿಗೆದಾರರು ಹಾಗೂ ಅಂಗೀಕೃತ ಸಂಸ್ಥೆಯ ಸಹಯೋಗದಲ್ಲಿ ಗುರುತಿನ ಪತ್ರ ನೀಡಲು ಸೂಚಿಸಲಾಗಿದೆ ಎಂದರು.
ಸ್ವಚ್ಛತಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿ ತಮ್ಮ ಸುರಕ್ಷತೆಗಾಗಿ ನೀಡಲಾಗಿರುವ ಸುರಕ್ಷತಾ ಪರಿಕರಗಳನ್ನು ಬಳಸದಿರುವುದು ಗಮನಕ್ಕೆ ಬಂದಿದೆ. ಸ್ವಚ್ಛತಾ ಕಾರ್ಮಿಕರು ಈ ಪರಿಕರಗಳನ್ನು ಬಳಸಿಕೊಂಡು ತಮ್ಮ ಆರೋಗ್ಯ ಸುರಕ್ಷತೆಗೆ ಗಮನಹರಿಸಬೇಕು. ಕಾರ್ಮಿಕರಿಗೆ ನೀಡಿರುವ ಸುರಕ್ಷತಾ ಪರಿಕರಗಳ ಬಗ್ಗೆ ಮುಂದಿನ ಸಭೆಯಲ್ಲಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ | ಮಾನವೀಯತೆ ಮೆರೆದ ಪೊಲೀಸರು, ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ ಆಸ್ಪತ್ರೆಗೆ
ಸ್ವಚ್ಛತಾ ಕಾರ್ಮಿಕರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆಯೆ? ಅವರಿಗೆ ದೊರೆಯಬೇಕಾದ ಸೇವಾ ಸೌಲಭ್ಯಗಳನ್ನು ಒದಗಿಸಲಾಗಿದೆಯೇ? ಉಪಹಾರ, ವಸತಿ, ವಿಶ್ರಾಂತಿಗೃಹ ಮುಂತಾದ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈವರೆಗೆ ಆರೋಗ್ಯ ತಪಾಸಣೆ ನಡೆಸದಿರುವ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಮುಂದಿನ ಸಭೆಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.
ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛತಾ ಕಾರ್ಮಿಕರು ನಿವೃತ್ತಿಗೊಂಡಿದ್ದಲ್ಲಿ ಅಂತಹ ಕಾರ್ಮಿಕರ ಕುಟುಂಬದ ಅವಲಂಬಿತರಿಗೆ ಉದ್ಯೋಗಾವಕಾಶ, ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಮಿಕರಿಗೆ ವಿಶಾಂತಿ ಗೃಹ ನಿರ್ಮಿಸಿ : ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಉದ್ಯಾನವನಗಳಲ್ಲಿ ಸ್ವಚ್ಛತಾ ಕಾರ್ಮಿಕರ ಅನುಕೂಲಕ್ಕಾಗಿ ಅವಕಾಶವಿರುವೆಡೆ ವಿಶ್ರಾಂತಿಗೃಹಗಳನ್ನು ನಿರ್ಮಿಸುವಂತೆ ಸೂಚಿಸಿದ ಅವರು, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಲೋಡರ್ಸ್ ಮತ್ತು ಡ್ರೈವರ್‌ಗಳು ನೇರಪಾವತಿ ವೇತನದಲ್ಲಿದ್ದು, ಇವರಿಗೆ ಕನಿಷ್ಠ ವೇತನ ಮತ್ತು ಇ.ಎಸ್.ಐ./ಪಿ.ಎಫ್. ಜಮೆಯಾಗದಿರುವ ಬಗ್ಗೆ ಅಹವಾಲುಗಳಿದ್ದು, ಈ ಸಂಬಂಧ ಗಮನಹರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ನಗರ ಯೋಜನಾ ಘಟಕದ ಯೋಜನಾಧಿಕಾರಿ ಮೂಕಪ್ಪ ಕರಭೀಮಣ್ಣನವರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ಜಯಲಕ್ಷ್ಮಮ್ಮ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್ ಸೇರಿದಂತೆ ಜಿಲ್ಲಾ ಜಾಗೃತ ಸಮಿತಿಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | ನೆರೆ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ