ಶಿವಮೊಗ್ಗ: ಬೆಂಗಳೂರಿನಿಂದ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರಲು ಹೋಗಿದ್ದ ಬ್ಯಾಂಕ್ ಮ್ಯಾನೇಜರ್ ರೈಲ್ವೆ ಬೋಗಿ ಶೌಚಾಲಯದಲ್ಲಿ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಅಶೋಕ್ ಚೌಧರಿ ಎಂಬವರೇ ರೈಲ್ವೆ ಶೌಚಾಲಯದಲ್ಲಿ ಸಾವನ್ನಪ್ಪಿದ ದುರ್ದೈವಿ. ಅಶೋಕ್ ಚೌಧರಿ ಅವರು ಅಸ್ಸಾಂ ಮೂಲದವರಾಗಿದ್ದು, ಅವರ ಹೆಂಡತಿ ಹಾಗೂ ಮಕ್ಕಳು ಅಸ್ಸಾಂನಿಂದ ಬೆಂಗಳೂರಿಗೆ ಬಂದಿದ್ದರು. ಅವರನ್ನು ಕರೆತರಲು ಅಶೋಕ ಚೌಧರಿ ಶನಿವಾರ ಶಿವಮೊಗ್ಗ- ಯಶವಂತಪುರದ ಇಂಟರ್‌ಸಿಟಿ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣ ಮಾಡಿದ್ದರು. ರೈಲು ಬೆಂಗಳೂರು ತಲುಪಿದರೂ ಅಶೋಕ್ ಇಳಿದಿರಲಿಲ್ಲ.
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಅವರ ಪತ್ನಿ ಫೋನಿನಲ್ಲಿ ಸಂಪರ್ಕಿಸಿದಾಗ ಅಶೋಕ್ ಫೋನ್ ಸ್ವಿಚ್ ಆಫ್ ಆಗಿತ್ತು. ಅವರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಲ್ಲದೆ, ರೈಲ್ವೆ ಸಚಿವರಿಗೆ ದೂರು ನೀಡಿದ್ದರು. ಇದರಿಂದ ರೈಲ್ವೆ ಸಚಿವರು ಅಶೋಕ ಚೌಧರಿ ಬಗ್ಗೆ ಪರಿಶೀಲಿಸುವಂತೆ ರೈಲ್ವೆ ಪೊಲೀಸರಿಗೆ ಸೂಚನೆ ನೀಡಿದ್ದರು. ತಕ್ಷಣ ರೈಲ್ವೆ ಸಿಬ್ಬಂದಿ ಎಲ್ಲಾ ಬೋಗಿಗಳನ್ನು ಪರಿಶೀಲಿಸಿದರೂ ಅಶೋಕ್ ಪತ್ತೆಯಾಗಿರಲಿಲ್ಲ. ಕೊನೆಗೆ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ಅದೇ ಇಂಟರ್‌ಸಿಟಿ ರೈಲು ಶನಿವಾರ ಬೆಳಗ್ಗೆ ಯಶವಂತಪುರವನ್ನು ಬಿಟ್ಟು ಮಧ್ಯಾಹ್ನ ಶಿವಮೊಗ್ಗ ತಲುಪಿದೆ. ಈ ವೇಳೆ ಬೋಗಿ ಸ್ವಚ್ಚಗೊಳಿಸುವ ಸಿಬ್ಬಂದಿ ಸ್ಚಚ್ಛತೆಗೆ ಹೋದಾಗ ಎಸಿ ರೂಂನ ಶೌಚಾಲಯ ಲಾಕ್ ಆಗಿತ್ತು. ಇದರಿಂದ ಅನುಮಾನಗೊಂಡ ಸಿಬ್ಬಂದಿ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ. ಅವರು ಬಂದು ಬಾಗಿಲು ಒಡೆದು ನೋಡಿದಾಗ ಅಶೋಕ್ ಚೌಧರಿ ಶವ ಪತ್ತೆಯಾಗಿದೆ. ಶೌಚಾಲಯಕ್ಕೆ ಹೋದಾಗ ಹೃದಯಾಘಾತದಿಂದ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: Bangalore-Mysore Express way : ನಿಯಂತ್ರಣ ತಪ್ಪಿ ಉರುಳಿದ ಬೈಕ್; ಟೆಕ್ಕಿ ಯುವತಿ ಸಾವು, ಯುವಕ ಗಂಭೀರ