ಶಿವಮೊಗ್ಗ: ರಾಷ್ಟ್ರಧ್ವಜದ ಬಗ್ಗೆ ಸುಳ್ಳು ಹೇಳುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ದೇಶದ್ರೋಹಿ ಎಂದಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಭಗವಾಧ್ವಜವೇ ಮುಂದೊಂದು ದಿನ ರಾಷ್ಟ್ರಧ್ವಜವಾಗಬಹುದು ಎಂದಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಂಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ವಿರುದ್ಧ ಹಾಗೂ ಆರ್‌ಎಸ್‌ಎಸ್ ಕುರಿತು ಆಡಿರುವ ಮಾತುಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | ಪಠ್ಯದಲ್ಲಿ ಹೆಡ್ಗೇವಾರ್ ಸೇರಿಸದೆ ಜಿನ್ನಾ ಹೆಸರು ಸೇರಿಸಬೇಕಿತ್ತಾ ಎಂದು ಕೇಳಿದ ಕೆ.ಎಸ್.ಈಶ್ವರಪ್ಪ
ತಮ್ಮನ್ನು ಪ್ರಾಣಿ ಎಂದಿದ್ದ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಮೋದಿ, ಯಡಿಯೂರಪ್ಪ ಅವರನ್ನು ಏಕ ವಚನದಲ್ಲಿ ಬೈದಿದ್ದರು. ಸಿದ್ದರಾಮಯ್ಯ ಅವರು ಯಾವಾಗ ಪ್ರಾಣಿಯಾದರು ಎಂದು ಈಗ ಹೇಳಲಿ ಎಂದರು. ಸಿಂಹದಮರಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿದ್ದಾರೆ. ನಪುಂಸಕರಾದ ಕಾಂಗ್ರೆಸ್ಸಿಗರು 75 ವರ್ಷ ಅಧಿಕಾರ ನಡೆಸಿದರೂ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಲಿಲ್ಲ. ಸಿದ್ದರಾಮಯ್ಯ ಅವರನ್ನು ಪ್ರಾಣಿಗೆ ಹೋಲಿಸಿದರೆ ಆ ಪ್ರಾಣಿಗೆ ಅವಮಾನ ಮಾಡಿದಂತೆ ಎಂದರು.
ಇಂದಿರಾಗಾಂಧಿ, ನೆಹರೂನೇ ಆರ್‌ಎಸ್‌ಎಸ್ ಅನ್ನು ಏನೂ ಮಾಡಲು ಆಗಿಲ್ಲ. ಇನ್ನು ಜುಜುಬಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರಿಂದ ಏನು ಮಾಡಲು ಆಗುತ್ತೆ ಎಂದು ಹರಿಹಾಯ್ದರು. ಸಿದ್ದರಾಮಯ್ಯ ಮೈಯಲ್ಲಿ ಅಹಲ್ಯಬಾಯಿ ಹೋಳ್ಕರ್ ರಕ್ತ ಹರಿಯುತ್ತಿದೆಯೋ ಅಥವಾ ಔರಂಗಜೇಬ್ ರಕ್ತ ಹರಿಯುತ್ತದೆಯೋ ಸ್ಪಷ್ಟಪಡಿಸಲಿ.
ಭಗವಾದ್ವಜಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಅದು ತ್ಯಾಗದ ಸಂಕೇತ. ಭಗವಾದ್ವಜ ಇನ್ಯಾವುದೋ ಸಮಯದಲ್ಲಿ ರಾಷ್ಟ್ರಧ್ವಜವಾಗಬಹುದು. ತ್ರಿವರ್ಣ ಧ್ವಜ ನಮ್ಮ ಸಂವಿಧಾತ್ಮಕ ಧ್ವಜ. ಅದಕ್ಕೆ ಗೌರವ ಕೊಡಲೇಬೇಕು. ಆರ್‌ಎಸ್‌ಎಸ್ ನಮ್ಮ ತಾಯಿ. ನಮ್ಮ ತಾಯಿಗೆ ಬೈದರೆ ಸಿಟ್ಟು ಬರುವುದು ಸಹಜ ಎಂದರು.
ಇದನ್ನೂ ಓದಿ| ದೆಹಲಿ ಏರ್‌ಪೋರ್ಟ್‌ನಲ್ಲಿ ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್ ಮಾಡಿದ ವ್ಯಕ್ತಿ