ಶಿವಮೊಗ್ಗ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಬೇಳೆ-ಕಾಳು, ಅಕ್ಕಿ, ರಗ್ಗು-ಜಮಖಾನೆ, ನಗದು (Election Code Of Conduct) ವಶಪಡಿಸಿಕೊಳ್ಳಲಾಗಿದೆ.
ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ 10 ಲಕ್ಷ ರೂ. ಮೌಲ್ಯದ ಅಕ್ಕಿ, ಬೇಳೆ, ಎಣ್ಣೆ, ಶಾವಿಗೆ, ಸಕ್ಕರೆ ಮತ್ತಿತರ ವಸ್ತುಗಳಿದ್ದ 500 ಬ್ಯಾಗ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ( Karnataka Election) ಅಕ್ರಮವಾಗಿ ಸಂಗ್ರಹಿಸಿಡಲು ಸಾಗಾಟ ಮಾಡುತ್ತಿದ್ದರೆಂದು ಆರೋಪಿಸಲಾಗಿದೆ.
ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 5 ಲಕ್ಷ ರೂ. ಮೌಲ್ಯದ 115 ಕ್ವಿಂಟಾಲ್ ಅಕ್ಕಿ, 4.50 ಲಕ್ಷ ರೂ. ಮೌಲ್ಯದ ರಗ್ಗು, ಜಮಖಾನೆ ವಶಪಡಿಸಿಕೊಳ್ಳಲಾಗಿದೆ. 3 ಲಗೇಜ್ ವಾಹನಗಳಲ್ಲಿ ರಗ್ಗು, ಜಮಖಾನೆ ಸಾಗಿಸಲಾಗುತ್ತಿತ್ತು. ಕುಂಸಿ ಠಾಣಾ ವ್ಯಾಪ್ತಿಯಲ್ಲಿ 90,000 ರೂ. ನಗದನ್ನು ಜಪ್ತಿ ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಚೆಕ್‌ಪೋಸ್ಟ್‌ನಲ್ಲಿ 4.50 ಲಕ್ಷ ರೂ ನಗದನ್ನು ಜಪ್ತಿ ಮಾಡಲಾಗಿದೆ. ಮೆಹಬೂಬ್ ಖಾನ್ ಎಂಬುವರು ದಾಖಲೆಯಿಲ್ಲದೇ 4.50 ಲಕ್ಷ ರೂ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಜೇರಟಗಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರಿಂದ ತಪಾಸಣೆ ನಡೆದಿದೆ. ಬುಲೆರೋ ವಾಹನದಲ್ಲಿ 4.50 ಲಕ್ಷ ರೂ ಹಣ ಸಾಗಾಟ ಮಾಡಲಾಗುತ್ತಿತ್ತು. ಸೂಕ್ತ ದಾಖಲೆಗಳಿಲ್ಲದ ಕಾರಣ ನಗದು ಹಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ನೇಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.