ಸಾಗರ: ಮುಂದಿನ 10 ವರ್ಷಗಳಲ್ಲಿ ಅರಣ್ಯ ಇಲಾಖೆ (Forest Department) ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಜತೆಗೆ ಅರಣ್ಯ ಸುಸ್ಥಿರ ಅಭಿವೃದ್ದಿಗೆ ಒತ್ತು ನೀಡುವಂತೆ ಒತ್ತಾಯಿಸಿ, ಗುರುವಾರ ವೃಕ್ಷಲಕ್ಷ ಆಂದೋಲನದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಹಾಲಿ ಹತ್ತು ವರ್ಷಗಳಿಗೆ ರೂಪಿಸಿರುವ ಕಾರ್ಯಯೋಜನೆಯಲ್ಲಿ ಅಗತ್ಯ ಬದಲಾವಣೆ ತರಬೇಕು. ವೃಕ್ಷಲಕ್ಷ ಆಂದೋಲನಾ ಸೇರಿದಂತೆ ವಿವಿಧ ಪರಿಸರ ಸಂಘಟನೆಗಳು ಈತನಕ ಅರಣ್ಯ ಸಂರಕ್ಷಣೆಗೆ ಕೈಗೊಂಡಿರುವ ಕಾರ್ಯಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಪಶ್ಚಿಮಘಟ್ಟ ಪ್ರದೇಶದಲ್ಲಿ ಅರಣ್ಯ ರಕ್ಷಣೆಗೆ ವಿಶೇಷ ಒತ್ತು ನೀಡಬೇಕು. ಭೂಕುಸಿತ ಪ್ರದೇಶದಲ್ಲಿ ನಡುತೋಪುಗಳನ್ನು ಕಟಾವು ಮಾಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ: Ballari News: ಏಷ್ಯನ್ ಗೇಮ್ಸ್‌ನಲ್ಲಿ ನಂದಿನಿಗೆ ಕಂಚು, ಸಿರುಗುಪ್ಪದ ಧೋಬಿ ಕುಟುಂಬದಲ್ಲಿ ಬೆಳಗಿದ ಪ್ರತಿಭೆ
ಏಕಜಾತಿ ನಡುತೋಪುಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಅಭಯಾರಣ್ಯಗಳ ಸುತ್ತಲಿನ ಪ್ರದೇಶಗಳಲ್ಲಿ ನೈಸರ್ಗಿಕ ಕಾಡು ರಕ್ಷಣೆಗೆ ವಿಶೇಷ ಯೋಜನೆ ರೂಪಿಸಬೇಕು. ಕಾಡು ಜೇನಿನ ರಕ್ಷಣೆಗೆ ವಿಶೇಷವಾದ ಒತ್ತು ನೀಡಬೇಕು. ವಿನಾಶದ ಅಂಚಿನಲ್ಲಿರುವ ಮರಬಳ್ಳಿಗಳ ಉಪ ಉತ್ಪನ್ನಗಳ ಸಂಗ್ರಹಣೆಗೆ ಅವಕಾಶ ನೀಡಬಾರದು. ಕರಾವಳಿಯಲ್ಲಿ ಕಾಂಡ್ಲಾ ಗಿಡಗಳು, ಅಳಿವೆಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಸ್ವಾಭಾವಿಕ ಅರಣ್ಯ ಸಂರಕ್ಷಣೆ ಅರಣ್ಯ ಇಲಾಖೆಯೆ ನಿರ್ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅರಣ್ಯ ಸಂರಕ್ಷಣಾ ಕಾರ್ಯಗಳ ಮೌಲ್ಯಮಾಪನಾ ಸಮಿತಿ ವಸ್ತುನಿಷ್ಟ ವರದಿಯನ್ನು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಅಗತ್ಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಡುತೋಪು ಕಟಾವಾಗಿರುವ ಸ್ಥಳಗಳಿಗೆ ಬೆಂಕಿ ಹಾಕುವ ಪದ್ದತಿ ನಿಲ್ಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದನ್ನೂ ಓದಿ: Bangalore Traffic : ಡ್ರೋನ್ ಬಳಿಕ ಟ್ರಾಫಿಕ್ ಕಂಟ್ರೋಲ್‌ಗೆ ಜಿಪಿಎಸ್; ಬೆಂಗಳೂರಿಗೆ ಟನಲ್ ರೋಡ್!
ಈ ಸಂದರ್ಭದಲ್ಲಿ ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪ್ರಮುಖರಾದ ಕೆ.ವೆಂಕಟೇಶ್, ಆರ್.ಎಸ್.ಗಿರಿ, ಆನೆಗೊಳಿ ಸುಬ್ರಾವ್, ಶ್ರೀಪಾದ ಬಿಚ್ಚುಗತ್ತಿ, ಕುಮಾರಸ್ವಾಮಿ, ಅಶೋಕ, ಎಂ.ಆರ್.ಪಾಟೀಲ್ ಇತರರು ಹಾಜರಿದ್ದರು.