Site icon Vistara News

Shivamogga News : ಸರ್ಕಾರಿ ಜಾಗ ಅತಿಕ್ರಮಿಸಿಕೊಂಡಿದ್ದ ತಾ. ಪಂ ಮಾಜಿ ಸದಸ್ಯೆ: ಬೇಲಿ ಕಿತ್ತೆಸೆದ ಅಧಿಕಾರಿಗಳು

#image_title

ಹೊಸನಗರ: ತಾಲೂಕಿನ ಕಸಬಾ ಹೋಬಳಿ ಕಚ್ಚಿಗೆಬೈಲ್ ಗ್ರಾಮದ ಸರ್ವೆ ನಂಬರ್ 31ರ ಸರ್ಕಾರಿ ಜಾಗವನ್ನು ಅಕ್ರಮವಾಗಿ ಕಬಳಿಸಿ ಟ್ರಂಚ್ ಹೊಡೆದು ಗಿಡಗಳನ್ನು ನೆಡಲು ಹವಣಿಸಲಾಗಿತ್ತು. ಇದರ ಜೊತೆಗೆ ಸಣ್ಣ-ಸಣ್ಣ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಹೊಸನಗರ ತಾಲೂಕು ಕಚೇರಿಯ ಕಂದಾಯ ಇಲಾಖೆಯ ಸಿಬ್ಬಂದಿಗಳು ಜಾಗವನ್ನು ತೆರವುಗೊಳಿಸಿ ತಮ್ಮ ಅಧೀನಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Shivamogga News: ಶಿವಮೊಗ್ಗ ಕ್ಷೇತ್ರಕ್ಕೆ 4ಜಿ ಆಧಾರಿತ 225 ಮೊಬೈಲ್ ಟವರ್ ಸ್ಥಾಪನೆಗೆ ಅನುಮತಿ: ಸಂಸದ ಬಿ.ವೈ. ರಾಘವೇಂದ್ರ

ಗುಡಿಸಲು ತೆರವುಗೊಳಿಸುತ್ತಿರುವುದು.

ಕಸಬಾ ಹೋಬಳಿ ಸರ್ವೆ ನಂಬರ್ 31ರಲ್ಲಿ ಸುಮಾರು 57.32 ಗಂಟೆ ಸರ್ಕಾರಿ ಜಾಗವಿದ್ದು, ಈ 52 ಎಕರೆಯಲ್ಲಿ ಸಾಕಷ್ಟು ಜನರು ಅಕ್ರಮವಾಗಿ ಬೇಲಿ ನಿರ್ಮಿಸಿಕೊಂಡು ಗಿಡ-ಮರಗಳನ್ನು ಬೆಳೆದು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಉಳಿದ ಜಾಗದಲ್ಲಿ ಬಿಜೆಪಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುಮಾರು ಎರಡು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಆದರೆ ಈ ಹಿಂದೆ ಹೊಸನಗರ ಸಾಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಿದ್ದರಿಂದ ಆ ಬೇಲಿ ಕೀಳುವ ಬಗ್ಗೆ ಚಿಂತಿಸಿಲ್ಲ ಎಂದು ಹೇಳಲಾಗಿದೆ.

ಬೋರ್ಡ್‌ ಹಾಕಿದ ಅಧಿಕಾರಿಗಳು

ಆದರೆ ಇದೀಗ ಸರ್ಕಾರ ಬದಲಾಗಿದ್ದು, ಶಾಸಕರು ಬದಲಾವಣೆಯಾಗಿದ್ದಾರೆ. ಇದರ ಜೊತೆಗೆ ಅಲ್ಲಿನ ಗ್ರಾಮಸ್ಥರ ದೂರು ಜಾಸ್ತಿಯಾಗಿರುವ ಕಾರಣ ತಹಶೀಲ್ದಾರರ ಆದೇಶದ ಮೇರೆಗೆ ರೆವಿನ್ಯೂ ಇನ್ಸ್‌ಪೆಕ್ಟರ್ ವೆಂಕಟೇಶ್ ಮೂರ್ತಿಯವರ ನೇತೃತ್ವದಲ್ಲಿ ಗ್ರಾಮ ಆಡಳಿತಾಧಿಕಾರಿ ದೀಪು ಹಾಗೂ ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ನಾಗಪ್ಪ ಅಶೋಕ ಇನ್ನೂ ಮುಂತಾದವರು ಅಕ್ರಮವಾಗಿ ನಿರ್ಮಿಸಿದ ಶೆಡ್ ಸುತ್ತ-ಮುತ್ತ ಹಾಕಿರುವ ಬೇಲಿಗಳನ್ನು ಕಿತ್ತು ಹಾಕಿದ್ದಾರೆ. ಅಕ್ರಮವಾಗಿ ಕಬಳಿಸಿದ್ದ ಸರ್ಕಾರಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಸರ್ಕಾರಿ ಜಾಗವನ್ನು ಕಬಳಿಕೆ ಯತ್ನ ನಡೆಸಿದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬೋರ್ಡ್ ಹಾಕಿದ್ದಾರೆ.

Exit mobile version