ಹೊಸನಗರ: ಮಕ್ಕಳಲ್ಲಿ ಬಾಲ್ಯದಲ್ಲಿಯೇ ಸಾಹಿತ್ಯಿಕ (Literature) ಆಸಕ್ತಿಯನ್ನು ಮೂಡಿಸಿ, ಅವರೂ ಕೂಡ ದೇಶಕ್ಕೆ ಸಾಹಿತ್ಯಿಕ ಕೊಡುಗೆಯನ್ನು ನೀಡಲು ಪ್ರೇರೇಪಿಸುವಂತೆ ಮಾಡಬೇಕು ಎಂದು 10ನೇ ತರಗತಿಯ ವಿದ್ಯಾರ್ಥಿ ಅರ್ಜುನ್ ರಾಜ್ ತಿಳಿಸಿದರು.
ಪಟ್ಟಣದ ಹೊರವಲಯದ ಮಾವಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಗುರುವಾರ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮಾವಿನಕೊಪ್ಪ, ಕರ್ನಾಟಕ ಜಾನಪದ ಪರಿಷತ್, ಅಕಾಡೆಮಿ ಆಫ್ ಬಿದನೂರು ಕಲ್ಚರ್ ನಗರ, ಮಲೆನಾಡು ವಾಯ್ಸ್ ಪತ್ರಿಕೆ ಇವರ ಸಹಯೋಗದಲ್ಲಿ ಹೊಸನಗರ ತಾಲೂಕು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಸಾಹಿತ್ಯದ ಬಗ್ಗೆ ಚಿಕ್ಕವರಿರುವಾಗಲೇ ಅರಿವು ಮೂಡಿಸಿದರೆ ಮುಂದೆ ಸಾಹಿತ್ಯ ಕ್ಷೇತ್ರ ಬೆಳೆಸಲು ಸಾಧ್ಯ ಎಂದರು.
ಇದನ್ನೂ ಓದಿ: Leap Year: 2024 ಅಧಿಕ ವರ್ಷ; ಹಾಗೆಂದರೇನು? ಯಾಕೆ ಪ್ರತಿ 4 ವರ್ಷಕ್ಕೊಮ್ಮೆ ಇದನ್ನು ಆಚರಿಸಲಾಗುತ್ತದೆ?
ಸಮ್ಮೇಳನದ ಸರ್ವಾಧ್ಯಕ್ಷೆ ಯಶಸ್ವಿನಿ ಓ.ಕೆ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಕ್ಕಳ ಕೊಡುಗೆ ಅಮೂಲ್ಯವಾಗಿದ್ದು, ಮಕ್ಕಳನ್ನು ಸಾಹಿತ್ಯ ಕ್ರೇತ್ರದೊಂದಿಗೆ ಸೇರಿಸಿಕೊಂಡು ಕನ್ನಡ ಸಾಹಿತ್ಯವನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.
ಈ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಮಾತನಾಡಿ, ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಮಕ್ಕಳನ್ನು ಕೂಡ ಸಾಹಿತ್ಯಕ್ಕಾಗಿ ಪ್ರೋತ್ಸಾಹ ನೀಡುವುದರಿಂದ ಸಾಹಿತ್ಯದ ಬೆಳವಣಿಗೆ ಕಾಣಬಹುದು, ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗಲೂ ಯಶಸ್ವಿಯಾಗಿ ಆಚರಣೆಯಾಗಬೇಕು. ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡುವಂತೆ ಶಾಲೆಯ ಶಿಕ್ಷಕ ವರ್ಗ ಪ್ರೇರೇಪಣೆ ಮಾಡಬೇಕು. ಇದಕ್ಕೆ ಪೋಷಕರು ಕೈಜೋಡಿಸಬೇಕು ಎಂದರು.
ಮಕ್ಕಳು ಪಠ್ಯ ಪುಸ್ತಕಗಳನ್ನು ಓದುವುದರ ಜತೆಗೆ ಸಾಹಿತ್ಯವನ್ನು ಕೂಡ ಓದಬೇಕು, ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹೊಸನಗರ ಪದವಿಪೂರ್ವ ಕಾಲೇಜ್ ಹೈಸ್ಕೂಲ್ ವಿಭಾಗದ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಸಮ್ಮೆಳನಾಧ್ಯಕ್ಷರ ಹಾಗೂ ಉದ್ಘಾಟಕರ ಮೆರವಣಿಗೆಯನ್ನು ಎಲ್ಲ ಸಂಘ ಸಂಸ್ಥೆಗಳ ಹಾಗೂ ಶಾಲಾ ವಿದ್ಯಾರ್ಥಿನಿಯರ ಜತೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಕೃಷ್ಣಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಗುರುರಾಜ್ ಆರ್., ರಾಮಕೃಷ್ಣ ಶಾಲೆಯ ವ್ಯವಸ್ಥಾಪಕ ದೇವರಾಜ್, ಪರಿಸರ ಪ್ರೇಮಿ ಎಸ್.ಎಚ್. ನಿಂಗಮೂರ್ತಿ, ಕಸಾಪ ತಾಲೂಕು ಅಧ್ಯಕ್ಷ ತ.ಮ.ನರಸಿಂಹ, ಚಂದ್ರಶೇಖರ ಶೆಟ್, ಶಿಕ್ಷಕ, ಸಾಹಿತಿ, ತಿರುಪತಿನಾಯ್ಕ್, ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್, ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ರಾಘವೇಂದ್ರ, ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ್‌ಮೂರ್ತಿ, ಮಾವಿನಕೊಪ್ಪ ಶಾಲೆಯ ಮುಖ್ಯ ಶಿಕ್ಷಕ ಕುಬೇಂದ್ರಪ್ಪ, ಡಾ.ಅಂಜಲಿ, ಅಶ್ವಿನಿ ಸುಧೀಂದ್ರ ಪಂಡಿತ್, ಗೌತಮ್ ಕುಮಾರಸ್ವಾಮಿ, ಎಚ್.ಆರ್ ಪ್ರಕಾಶ್, ಪರಮೆಶ್ವರಪ್ಪ, ಕರಿಬಸಪ್ಪ, ಕೆ.ಇ.ಬಿ ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.