Site icon Vistara News

Hosanagara News: ಹೊಸನಗರದಲ್ಲಿ ಎಸ್‌ಡಿಎಂಸಿ ಸದಸ್ಯನ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

Protest against attack on SDMC member in Hosanagara

ಹೊಸನಗರ: ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನ್‌ ಕುಮಾರ್‌ ಎಂಬುವವರು ಎಸ್‌ಡಿಎಂಸಿ ಸದಸ್ಯ ನೇರಲೆ ರಮೇಶ್‌ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಈ ಕೃತ್ಯವನ್ನು ಖಂಡಿಸಿ, ತಾಲೂಕು ಬಿಜೆಪಿ ಮುಖಂಡರು, ಜೆಸಿಐ ಮತ್ತು ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಸೋಮವಾರ (Hosanagara News) ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸ್ ನಿಲ್ದಾಣದ ಆವರಣದಿಂದ ಶಾಲೆಯ ಆವರಣದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ಹಲ್ಲೆ ನಡೆಸಿದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷನ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿ.ಪಂ. ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಮಾತನಾಡಿ, ಅಶ್ವಿನ್‌ ಕುಮಾರ್ ಕೆ.ಕೆ. ಅವರು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪಟ್ಟಣ ಪಂಚಾಯತಿಯ ಹಾಲಿ ಸದಸ್ಯರಾಗಿ ಸೌಜನ್ಯದಿಂದ ವರ್ತಿಸಬೇಕಿತ್ತು. ಆದರೆ ಕಳೆದ ಶನಿವಾರ ಬೆಳಿಗ್ಗೆ ಶಾಲೆಯಲ್ಲಿ ಶತಮಾನೋತ್ಸವ ಕುರಿತು ಊರಿನ ಪ್ರಮುಖರ ಸಭೆ ಕರೆದಿದ್ದಾರೆ, ಸಭೆಯಲ್ಲಿ ಸದಸ್ಯ ರಮೇಶ್‌, ಶಾಲೆಗೆ 100 ವರ್ಷವಾಗಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಮುಖ್ಯೋಪಾಧ್ಯಾಯರು ಶಾಲೆಯ ದಾಖಲೆ ಓದಿ ಹೇಳಿದ ಮೇಲೆ ಪ್ರಮುಖರ ಸಭೆ ಮುಕ್ತಾಯವಾಗಿದೆ. ನಂತರ ಎಸ್‌ಡಿಎಂಸಿ ಸಭೆ ನಡೆದಿದ್ದು, ಆ ಸಭೆಯಲ್ಲಿ ಶಾಲೆಗೆ 100 ವರ್ಷದ ದಾಖಲೆ ಕೇಳಿರುವ ಬಗ್ಗೆ ಪ್ರಾಸ್ತಾಪಿಸಿದ್ದು ಸರಿಯಲ್ಲ ಅದನ್ನು ಕೇಳಲು ನೀನು ಯಾರು? ಎಂದು ರಮೇಶ್ ಮೇಲೆ ಅಲ್ಲಿಯೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ಈ ಕೃತ್ಯ ತೀವ್ರ ಖಂಡನೀಯ. ಅಶ್ವಿನ್‌ ಕುಮಾರ್ ಅವರನ್ನು ತಕ್ಷಣ ಬಂಧಿಸಬೇಕು ಹಾಗೂ ಎಸ್‌ಡಿಎಂಸಿ ಸಮಿತಿಯನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತಿನಲ್ಲಿಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ರಶ್ಮಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿ, ನನಗೆ ಮೂರು ದಿನಗಳ ಕಾಲಾವಕಾಶ ಕೊಡಿ. ನೀವು ನೀಡಿರುವ ದೂರಿನ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಬಿಜೆಪಿ ಮುಖಂಡರಾದ ಕೆ.ವಿ.ಕೃಷ್ಣಮೂರ್ತಿ, ಉಮೇಶ್ ಕಂಚುಗಾರ್, ಎನ್.ಆರ್. ದೇವಾನಂದ್, ಎಂ.ಎನ್ ಸುಧಾಕರ್, ನೇರಲೆ ರಮೇಶ್, ಆಲವಳ್ಳಿ ವೀರೇಶ್, ಕಾಲಸಸಿ ಸತೀಶ, ಕೋಣೆಮನೆ ಶಿವಕುಮಾರ್, ಹೆಚ್.ಎಸ್. ಮಂಜುನಾಥ್, ಶ್ರಿಧರ ಚಿಕ್ಕನಕೊಪ್ಪ, ಮಾವಿನಕೊಪ್ಪ ತಿಮ್ಮಪ್ಪ, ಮಂಡಾನಿ ಮೋಹನ್, ಮಾವಿನಕೊಪ್ಪ ಗೌತಮ್, ಜಯನಗರ ಪ್ರಹ್ಲಾದ್, ಶಾಲೆಯ ಎಸ್‌ಡಿಎಂಸಿ ಸದಸ್ಯೆ ಜಯಲಕ್ಷ್ಮಿ, ಪಟ್ಟಣ ಪಂಚಾಯತಿ ಸದಸ್ಯರಾದ ಗುರುರಾಜ್ ಆರ್, ಸುರೇಂದ್ರ, ನಾಗರಾಜ್ ಇತರರು ಪಾಲ್ಗೊಂಡಿದ್ದರು.

Exit mobile version