ಹೊಸನಗರ: ಮಲೆನಾಡಿನ ಪಾರಂಪರಿಕ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು, ಏಲಕ್ಕಿ ಸೇರಿದಂತೆ ವಿವಿಧ ಕೃಷಿ ತೋಟಗಳಲ್ಲಿ ಮಂಗಗಳ (Monkeys) ಹಾವಳಿ ಹೆಚ್ಚಾಗಿದ್ದು, ಇದು ರೈತಾಪಿವರ್ಗಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಪುರಪ್ಪೆಮನೆ ಗ್ರಾ.ಪಂ. ವ್ಯಾಪ್ತಿಯ ಉಮಾಮಹೇಶ್ವರಿ ಮಹಿಳಾ ಸಂಘದಿಂದ ಮಂಗನ ಹಾವಳಿ ತಡೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಶುಕ್ರವಾರ ಪುರಪ್ಪೆಮನೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಬೆಳೆ ನಾಶದಿಂದಾಗಿ ಕೃಷಿಕರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ದಿನ ಕಳೆದಂತೆ ಮಂಗನ ಹಾವಳಿ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಮುತುವರ್ಜಿವಹಿಸಿ ಮಂಗಗಳ ಸೆರೆ ಹಿಡಿಯುವ ಕಾರ್ಯಕ್ಕೆ ಮುಂದಾಗಬೇಕು. ಅಲ್ಲದೆ ಸ್ಥಳಾಂತರ ಮಾಡುವ ಮೂಲಕ ಈ ಭಾಗದ ಕೃಷಿಕರು ನೆಮ್ಮದಿಯ ಜೀವನ ಸಾಗಿಸಲು ಸಹಕರಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.
ಇದನ್ನೂ ಓದಿ: Benefits Of Chikoo: ಚಿಕ್ಕೂ ಎಂಬ ಚಿಕ್ಕ ಹಣ್ಣಿನ ಸದ್ಗುಣಗಳು ಗೊತ್ತೇ?
ಸಾಗರ ವಿಭಾಗದ ಡಿಎಫ್‌ಓ ಸಂತೋಷ್ ಕುಮಾರ್ ಕೆಂಚಪ್ಪನವರ್ ಮಾತನಾಡಿ, ಪ್ರಾಣಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಮಂಗಗಳ ಸೆರೆ ಕಷ್ಟಸಾಧ್ಯ ಕೆಲಸ. ಗರ್ಭಧರಿಸಿರುವ ಮಂಗಗಳಿಗೆ ಗಾಯ, ನೋವಾಗದಂತೆ ಸೆರೆ ಹಿಡಿಯಬೇಕಿದೆ. ಅವುಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಕಾರ್ಯ ಸದ್ಯಕ್ಕೆ ಅಸಾಧ್ಯ ಮಾತಾಗಿದ್ದು, ಸೆರೆ ಹಿಡಿಯುವ ಕಾರ್ಯದ ಖರ್ಚು-ವೆಚ್ಚವನ್ನು ಸ್ಥಳೀಯ ಸಂಘ-ಸಂಸ್ಥೆಗಳೇ ಭರಿಸಬೇಕಿದೆ. ಅಲ್ಲದೆ, ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತದ ಮೇಲುಸ್ತುವಾರಿಯಲ್ಲಿ ಈ ಕಾರ್ಯ ನಡೆಯಲಿ ಎಂಬ ಸಲಹೆ ನೀಡಿದರು.
ಈ ವೇಳೆ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಪರಸ್ಪರ ಒಪ್ಪಿ ಸಭಾ ನಡಾವಳಿ ದಾಖಲಿಸಲಾಯಿತು.
ಇದನ್ನೂ ಓದಿ: Reliance Q3 results: ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭ 17,265 ಕೋಟಿ ರೂ.ಗೆ ಏರಿಕೆ
ಸಭೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ಹಹಣಾಧಿಕಾರಿ ನರೇಂದ್ರ ಕುಮಾರ್, ಪುರಪ್ಪೆಮನೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತ ದಿನೇಶ್, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪಿಡಿಓ ಜಗದೀಶ್ ಕೆ ಮಗವಾಡ, ಡಿಆರ್‌ಎಫ್‌ಓ ದೊಡ್ಮನಿ, ಪ್ರಮುಖರಾದ ಕಿರಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.