ರಿಪ್ಪನ್ಪೇಟೆ: ಶಿವಮೊಗ್ಗದ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ (Karnataka Elections 2023) ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷಗಳ ಅಬ್ಬರದ ಪ್ರಚಾರ, ಮೆರವಣಿಗೆಗಳು ನಡೆಯುತ್ತಿವೆ. ಈ ಅಬ್ಬರದ ಪ್ರಚಾರದ ಮಧ್ಯೆ ಒಬ್ಬ ಸಾಫ್ಟ್ವೇರ್ ಎಂಜಿನಿಯರ್ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದು, ಹಣವಂತರ ಅಬ್ಬರದ ಪ್ರಚಾರದ ಮಧ್ಯೆ ಟೆಕ್ಕಿ (Techie) ಸರಳ ರೀತಿಯಲ್ಲಿ ಅಖಾಡಕ್ಕೆ ಇಳಿದಿದ್ದಾರೆ.
ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಹಳ್ಳಿ ಗ್ರಾಮದ ಅಬ್ಬಿ ಕಿರಣ್ ಹೆಸರಿನ ಟೆಕ್ಕಿ ರವಿ ಕೃಷ್ಣ ರೆಡ್ಡಿ ನೇತೃತ್ವದ ಕೆಆರ್ಎಸ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಬದಲಾವಣೆಗಾಗಿ ನನಗೆ ಮತ ಎನ್ನುವ ಧ್ಯೇಯದೊಂದಿಗೆ ಅವರು ಸ್ಪರ್ಧೆಯಲ್ಲಿ ನಿಂತಿದ್ದಾರೆ.
ಗುರುವಾರ ಸಾಗರ ಉಪವಿಭಾಗಾಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿರುವ ಅಬ್ಬಿ ಕಿರಣ್ ಹೊಸನಗರ ತಾಲೂಕಿನ ಪ್ರಭಾವಿ ರಾಜಕಾರಣಿಯಾಗಿದ್ದ ಅಬ್ಬಿ ಈಶ್ವರಪ್ಪರವರ ಪುತ್ರ. ಬೆಂಗಳೂರಿನ ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತಿದ್ದಾರೆ. ಕೈಗೆ ಲಕ್ಷಾಂತರ ರೂ. ವೇತನ ಬರುತ್ತಿದ್ದರೂ ಅದೆಲ್ಲವನ್ನೂ ಬಿಟ್ಟು ಚುನಾವಣೆಗೆ ಇಳಿದಿದ್ದಾರೆ. ಎಲ್ಲೂ ಕೂಡ ಸಮಾವೇಶ, ಸಭೆ ನಡೆಸದೆ ಮನೆ ಮನೆಗೆ ತೆರಳಿ ತಮ್ಮ ಭರವಸೆಗಳ ಬಗ್ಗೆ ಹೇಳುತ್ತಿದ್ದಾರೆ.
ಇದನ್ನೂ ಓದಿ: Karnataka Elections : ಸಾಗರದಲ್ಲಿ ಹಾಲಪ್ಪ ಅಭ್ಯರ್ಥಿತನಕ್ಕೆ ಹಿರಿಯ ಬಿಜೆಪಿ ಮುಖಂಡರಿಂದಲೇ ವಿರೋಧ; ಸೋಲಿಸುವ ಪಣ
ಕಿರಣ್ ಅವರು ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಿ ಎಂದು ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಯಾವುದೇ ಆಡಂಬರವಿಲ್ಲದೇ ಸರಳ ರೀತಿಯಲ್ಲಿ ಮತ ಕೇಳುತ್ತಿದ್ದಾರೆ. ಇನ್ನು ಇವರ ಹೋರಾಟಕ್ಕೆ ಪ್ರಜ್ಞಾವಂತ ನಾಗರಿಕರು ಬೆಂಬಲ ನೀಡುತ್ತಿದ್ದು, ಇಂತಹ ಸಜ್ಜನ ವಿದ್ಯಾವಂತರಿಗೆ ಜನರು ಪ್ರೋತ್ಸಾಹಿಸಬೇಕೆಂದು ಸ್ಥಳೀಯರು ಕೇಳಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರಮುಖ ಪಕ್ಷಗಳ ಅಬ್ಬರದ ಮಧ್ಯೆ ಎಂಜಿನಿಯರ್ ಸರಳ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದು, ಇವರಿಗೆ ಮತದಾರರು ಯಾವ ರೀತಿ ಸಹಕಾರ ನೀಡುತ್ತಾರೆ ಎಂಬುವುದಕ್ಕೆ ಚುನಾವಣೆಯ ಫಲಿತಾಂಶದವರೆಗೆ ಕಾದು ನೋಡಬೇಕಿದೆ.