Site icon Vistara News

Karnataka Election: ಸುಳ್ಳು ಆರೋಪ ಮಾಡಿ ಮತಗಿಟ್ಟಿಸಲು ಕಾಂಗ್ರೆಸ್‌ನವರು ನಿಸ್ಸೀಮರು: ಆರಗ ಜ್ಞಾನೇಂದ್ರ

#image_title

ರಿಪ್ಪನ್‌ಪೇಟೆ: ಪಿಎಸ್‌ಐ ಹಗರಣಕ್ಕೆ ಸಬಂಧಪಟ್ಟಂತೆ ಪ್ರಕರಣದ ಆರೋಪಿಗಳೆಲ್ಲರೂ ಈಗಾಗಲೇ ಜೈಲಿನಲ್ಲಿದ್ದಾರೆ. ಆದರೆ, ಈ ವಿಚಾರವನ್ನು ಅರಿತುಕೊಳ್ಳದ ಕಾಂಗ್ರೆಸ್‌ ನನ್ನ ಮೇಲೆ ಸುಳ್ಳು ಆರೋಪ ಮಾಡಿಕೊಂಡು ಬರುತ್ತಿದ್ದು, ಆ ಮೂಲಕ ಮತ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದೆ. ಅದರಲ್ಲಿ ಅವರು ನಿಸ್ಸೀಮರು ಎಂದು ರಾಜ್ಯ ಗೃಹ ಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಿಎಸ್‌ಐ ಪ್ರಕರಣದ ಆರೋಪಿಗಳು ಬಿಜೆಪಿಯ ಆರಗ ಜ್ಞಾನೇಂದ್ರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕಿಮ್ಮನೆ ರತ್ನಾಕರ್‌ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪವನ್ನು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ರಿಪ್ಪನ್‌ಪೇಟೆ ಸಮೀಪದ ನಾಗರಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾವರ್ಧಂತ್ಯುತ್ಸವ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, “ಈಗಾಗಲೇ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದ್ದು, ಕಳೆದ ಭಾರಿ 23 ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದೆ. ಈ ಬಾರಿ ಅದರ ಎರಡು ಪಟ್ಟು ಹೆಚ್ಚು ಅಂತರದಿಂದ ಗೆಲ್ಲಲಿದ್ದೇನೆ. ನನ್ನ ಈ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಆಭಿವೃದ್ಧಿಗಾಗಿ 3000 ಕೋಟಿ ರೂ. ಅನುದಾನವನ್ನು ತಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರಾಜ್ಯಕ್ಕೆ ಶುದ್ಧ ಕುಡಿಯುವ ನೀರಿನ ಜಲಮಿಷನ್ ಯೋಜನೆಯಡಿ 9000 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ತೀರ್ಥಹಳ್ಳಿ ತಾಲೂಕಿನಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವುದರೊಂದಿಗೆ ನೀರಿನ ಬವಣೆಯನ್ನು ದೂರ ಮಾಡಲಾಗಿದೆ” ಎಂದರು.

ಇದನ್ನೂ ಓದಿ: Karnataka Election 2023: ಕಲಘಟಗಿಯಲ್ಲಿ ಸಂತೋಷ್‌ ಲಾಡ್‌ ಭರ್ಜರಿ ಪ್ರಚಾರ; ಕ್ಷೇತ್ರದುದ್ದಕ್ಕೂ ಪಾದಯಾತ್ರೆ

“ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವಧಿಯಲ್ಲಿ ಪಿಯುಸಿ ಪ್ರಶ್ನೆಪತ್ರಿಕೆ ಹಗರಣದಲ್ಲಿನ ಆರೋಪಿಗಳನ್ನು ಬಂಧಿಸುವಲ್ಲಿ ಏನು ಮಾಡಿದರು ಎನ್ನುವುದು ರಾಜ್ಯದ ಜನರಿಗೆ ತಿಳಿದಿರುವ ವಿಷಯವಾಗಿದೆ” ಎಂದು ಸಚಿವರು ಹೇಳಿದರು.

“ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 136ಕ್ಕೂ ಅಧಿಕ ಸ್ಥಾನ ಪಡೆದು ನೂತನ ಸರ್ಕಾರದ ಚುಕ್ಕಾಣಿಯನ್ನು ಹಿಡಿಯಲಿದೆ” ಎಂದು ಆರಗ ಜ್ಞಾನೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಹುಂಚ ವಿ.ಎಸ್.ಎಸ್.ಎನ್.‌ ಅಧ್ಯಕ್ಷ ಯದುವೀರ್, ನಾಗರಾಜ ಅಮೃತ, ದೇವಸ್ಥಾನ ಸಮಿತಿಯವರು ಹಾಜರಿದ್ದರು.

Exit mobile version