ಶಿವಮೊಗ್ಗ: ಬಿಜೆಪಿ ಕಾರ್ಯಕರ್ತ ಹರೀಶ್ ಎಂಬುವವರ ಪುತ್ರ ಅಪಘಾತದಲ್ಲಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ (Karnataka Election) ಕೆ.ಬಿ. ಅಶೋಕ ನಾಯ್ಕ ಅವರು ಹರೀಶ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅಲ್ಲದೆ, ಛಾಯಾಗ್ರಾಹಕ ಚಂದ್ರಣ್ಣ ಅವರ ಮನೆಗೂ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಆಯನೂರು ಕೋಹಳ್ಳಿ ಭಾಗದಲ್ಲಿ ಪ್ರಮುಖರ ಮನೆಗಳಿಗೆ ಭೇಟಿ ನೀಡುವ ಜತೆಯಲ್ಲಿಯೇ ನಾಗರಿಕರ ಮನೆ ಮನೆಗಳಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅಶೋಕ ನಾಯ್ಕ, ಗ್ರಾಮಾಂತರ ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಜನಬೆಂಬಲ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಅಂತರದಿಂದ ಗೆಲ್ಲಿಸುವುದಾಗಿ ಕಾರ್ಯಕರ್ತರು ಭರವಸೆ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೆ.ಬಿ. ಅಶೋಕ ನಾಯ್ಕ ಅವರೊಂದಿಗೆ ಗ್ರಾಮಾಂತರ ಚುನಾವಣಾ ಪ್ರಮುಖರಾಗಿ ಆಗಮಿಸಿರುವ ಉತ್ತರಾಖಂಡ ಮಾಜಿ ಶಾಸಕ ಮುಖೇಶ್ ಸಿಂಗ್ ಕೋಲಿ, ತಮ್ಮಡಿಹಳ್ಳಿ ನಾಗರಾಜ್ ಸೇರಿದಂತೆ ಆಯನೂರು ಕೋಹಳ್ಳಿ ಗ್ರಾಮದ ಪಕ್ಷದ ಅನೇಕ ಮುಖಂಡರು ಮನೆ ಮನೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ವಿವಿಧ ಕಡೆಗಳಲ್ಲಿ ಗ್ರಾಮದ ಮುಖಂಡರೊಂದಿಗೆ ಚರ್ಚೆ ನಡೆಸಲಾಯಿತು.
ಇದನ್ನೂ ಓದಿ: Shivamogga News: ಸಾರ್ವಜನಿಕರ ಸಹಕಾರದಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯ ಸಾಧ್ಯ: ಶಾಸಕ ಅಶೋಕ ನಾಯ್ಕ್
ಈ ವೇಳೆ ಮಾತನಾಡಿದ ಅಶೋಕ ನಾಯ್ಕ, “ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿ ಸರ್ಕಾರದ ನೆರವಿನಿಂದ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ಯೋಜನೆಯ ಕಾಮಗಾರಿಗಳಿಗೆ ಕೆಲಸ ನಡೆದಿದೆ. ನೀರಾವರಿ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿದ ಪರಿಣಾಮ ಸಾವಿರಾರು ರೈತರಿಗೆ ಗ್ರಾಮಾಂತರ ಭಾಗದಲ್ಲಿ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಆಗಲಿದೆ” ಎಂದು ಹೇಳಿದರು.
ಆಯನೂರು ಕೋಹಳ್ಳಿ ಭಾಗದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು, ಮಹಾಶಕ್ತಿ ಕೇಂದ್ರದ ಮುಖಂಡರೊಂದಿಗೆ ಕ್ಷೇತ್ರದ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಅದಕ್ಕೂ ಮೊದಲು ಬುಧವಾರ ಬೆಳಗ್ಗೆಯೇ ಡಿ.ಬಿ.ಹಳ್ಳಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಕಾಶಿ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳ ಆಶೀರ್ವಾದ ಪಡೆದರು. ರಾಜೇಶ್ ಪಟೇಲ್, ಬಸಣ್ಣ, ರುದ್ರೋಜಿ, ರಾಧಾಕೃಷ್ಣ, ಚಂದ್ರು ಜೀವನ್, ಮತ್ತಿತರರು ಅವರೊಂದಿಗಿದ್ದರು.