Site icon Vistara News

Karnataka Election: ಕಾಂಗ್ರೆಸ್‌-ಜೆಡಿಎಸ್‌ ಮ್ಯಾಚ್‌ ಫಿಕ್ಸಿಂಗ್‌ನಿಂದ ಗೆದ್ದಿದ್ದಾರೆ: ಅಶೋಕ ನಾಯ್ಕ ಆರೋಪ

#image_title

ಶಿವಮೊಗ್ಗ: “ಕಳೆದ ಬಾರಿ 69 ಸಾವಿರ ಮತ ಪಡೆದು ಗೆಲುವು ಸಾಧಿಸಿದ್ದೆವು. ನಾವು ಈ ಬಾರಿ ಸೋತರೂ 71 ಸಾವಿರ ಮತ ಪಡೆದಿದ್ದೇವೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದ್ದರಿಂದ ಅವರು ಗೆದ್ದಿದ್ದಾರೆ” ಎಂದು ಮಾಜಿ ಶಾಸಕ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ (Karnataka Election) ಅಶೋಕ್ ನಾಯ್ಕ್ ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮತದಾನದ ದಿನ ಮತಗಟ್ಟೆಗಳ ಬಳಿ ಸ್ಲಿಪ್ ಕೊಡಲೂ ಕಾಂಗ್ರೆಸ್ ಕಾರ್ಯಕರ್ತರಿರಲಿಲ್ಲ. ಒಂದು ರಾಷ್ಟ್ರೀಯ ಪಕ್ಷ ಇನ್ನೊಂದು ಪಕ್ಷದೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿತ್ತು. ನಮಗೆ ಹಿಂದಿನ ಚುನಾವಣೆಗಿಂತ ಹೆಚ್ಚಿನ ಮತ ಸಿಕ್ಕಿವೆ. ಆದರೆ, ಜೆಡಿಎಸ್‌ಗೆ ಹೆಚ್ಚುವರಿ ಮತ ಸಿಕ್ಕಿದ್ದು ಎಲ್ಲಿ ಎಂಬುದು ಸ್ಪಷ್ಟವಾಗುತ್ತದೆ. ಗ್ರಾಮಾಂತರದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ” ಎಂದು ಅಶೋಕ್‌ ನಾಯ್ಕ್‌ ತಿಳಿಸಿದರು.

ಇದನ್ನೂ ಓದಿ: Karnataka Election: ವರಿಷ್ಠರ ಮಾತು ಕೇಳಿ ಚಿನ್ನದಂತಹ ಗೋವಿಂದರಾಜನಗರ ಬಿಟ್ಟೆ: ವಿ.ಸೋಮಣ್ಣ

“ಗ್ರಾಮೀಣದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಅಂಥವರ ವಿರುದ್ಧ ಪಕ್ಷದ ಜಿಲ್ಲಾಧ್ಯಕ್ಷರಿಗೆ ದೂರು ನೀಡುವೆ. ಚುನಾವಣೆಯಲ್ಲಿ ಅದರಿಂದ ಯಾವುದೇ ಪರಿಣಾಮ ಬೀರಿಲ್ಲ. ಆದರೂ ಶಿಸ್ತುಕ್ರಮಕ್ಕೆ ಒತ್ತಾಯಿಸಲಾಗುವುದು” ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಹೆಚ್ಚು ಮತ ಪಡೆದಿದ್ದೇನೆ

“ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು, ನಮ್ಮಿಂದ ಅಶೋಕ ನಾಯ್ಕ ಸೋತಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ವಾಸ್ತವದಲ್ಲಿ ಅವರ ಪಕ್ಷ ವಿರೋಧಿ ಚಟುವಟಿಕೆ ಯಾವುದೇ ಪರಿಣಾಮ ಬೀರಿಲ್ಲ. ನಾನು ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚು ಮತ ಪಡೆದಿದ್ದೇನೆ” ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಇದನ್ನೂ ಓದಿ: Karnataka Election 2023 : ಮುಖ್ಯಮಂತ್ರಿ ಆಯ್ಕೆ; ಕಾಂಗ್ರೆಸ್‌ ಉನ್ನತ ನಾಯಕರಲ್ಲಿಯೇ ಮೂಡದ ಒಮ್ಮತ!

“ನಾವು ಆನವೇರಿ ಭಾಗದಲ್ಲಿ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಜೆಡಿಎಸ್‌ನ ಕೆಲ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಆದರೂ ನಮ್ಮ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳಲಿಲ್ಲ. ಜೆಡಿಎಸ್‌ನವರು ಒಳಮೀಸಲಾತಿ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಿದರು. ಒಳಮೀಸಲಾತಿ ಜಾರಿಯಿಂದ ಬಂಜಾರ, ಕೊರಮ, ಕೊರಚ, ಭೋವಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಅಪಪ್ರಚಾರ ಮಾಡಿದರು. ಒಳಮೀಸಲಾತಿಯಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದವರು ಈಗ ಶಾಸಕರಾಗಿದ್ದಾರೆ. ಮುಂದೆ ಈ ತಪ್ಪನ್ನು ಸರಿಪಡಿಸಲಿ ನೋಡೋಣ” ಎಂದು ಅಶೋಕ್‌ ನಾಯ್ಕ್ ಸವಾಲು ಹಾಕಿದರು.

“ನಮ್ಮ ಕಾರ್ಯಕರ್ತರು ಹಗಲಿರುಳು ನನ್ನ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ಈಗ ನನ್ನ ಸೋಲಿನಿಂದ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಆದರೆ‌, ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ. ಮುಂದಿನ ಚುನಾವಣೆಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ಮೂಲಕ ಸೋಲಿಗೆ ಪ್ರತ್ಯುತ್ತರ ನೀಡುವ ಶಕ್ತಿ ನಮಗಿದೆ” ಎಂದು ಅಶೋಕ್‌ ನಾಯ್ಕ್‌ ತಿಳಿಸಿದರು.

“ಗ್ರಾಮಾಂತರದಲ್ಲಿ ನಾನು ಶಾಸಕನಾಗಿ ಐದು ವರ್ಷ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನನ್ನ ಕಾಲದಲ್ಲಿ ನಿರ್ಮಾಣವಾದ ರಸ್ತೆಗಳನ್ನು ಈಗಿನ ಶಾಸಕರು ಐದು ವರ್ಷ ನಿರ್ವಹಣೆ ಮಾಡಿದರೆ ಸಾಕು” ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಇದನ್ನೂ ಓದಿ: Karnataka Election Results: ಸಿಎಂ, ಡಿಸಿಎಂ ಸ್ಥಾನಕ್ಕಾಗಿ ಲಾಬಿ; ಸ್ವಾಮೀಜಿಗಳ ಸಹಿತ ಎಲ್ಲೆಡೆಯಿಂದ ಒತ್ತಡ

ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ರತ್ನಾಕರ ಶೆಣೈ, ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಕಲ್ಲಜ್ನಾಳ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಪ್ರಮುಖರಾದ ಟಿ.ಬಿ.ಜಗದೀಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

Exit mobile version