Site icon Vistara News

Karnataka Election: ಕುಟುಂಬ ಒಡೆಯುತ್ತಿರುವ ಹಾಲಪ್ಪ ಸೋಲು ನಿಶ್ಚಿತ: ಬೇಳೂರು ಗೋಪಾಲಕೃಷ್ಣ

#image_title

ಸಾಗರ: “ಕಳೆದ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆಂದು ಜನರು ಬಿಜೆಪಿಯನ್ನು ಬೆಂಬಲಿಸಿದ್ದರು. ಈ ಬಾರಿ ಅಂತಹ ಯಾವುದೇ ಪ್ರಸ್ತಾಪ ಇಲ್ಲದೆ ಇರುವುದರಿಂದ ಮತದಾರರು ಕಾಂಗ್ರೆಸ್ ಪಕ್ಷವನ್ನು ಜಿಲ್ಲಾದ್ಯಂತ ಬೆಂಬಲಿಸುತ್ತಾರೆ” ಎಂದು ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕ್ಷೇತ್ರವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಡೆ ದೊಡ್ಡ ಪ್ರಮಾಣದಲ್ಲಿ ಯುವ ಸಮುದಾಯ ಬರುತ್ತಿದ್ದು, ಕಾಂಗ್ರೆಸ್ ಗೆಲುವು ನಿಶ್ಚಿತ” ಎಂದು ಹೇಳಿದರು.

“ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಸಂಪೂರ್ಣ ವೈಫಲ್ಯತೆ ಕಂಡಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ರೈತರು, ಬಡವರ ಕಡೆ ಕಣ್ಣೆತ್ತಿ ನೋಡದ ಶಾಸಕರಿದ್ದರು. ಅಡಿಕೆಗೆ ಎಲೆಚುಕ್ಕೆ ರೋಗ ಬಂದ ಸಂದರ್ಭದಲ್ಲಿ ಬೆಳೆಗಾರರ ನೆರವಿಗೆ ಬರಲಿಲ್ಲ. ಕಾಗೋಡು ತಿಮ್ಮಪ್ಪ ಶಾಸಕರಾಗಿದ್ದಾಗ ಕೊಳೆರೋಗ ಬಂದಾಗ ಸುಮಾರು 40 ಕೋಟಿ ರೂ. ಪರಿಹಾರ ಕೊಡಿಸಿದ್ದರು. ಈಗಿನ ಶಾಸಕರು ಒಂದು ಪೈಸೆ ಪರಿಹಾರ ಕೊಡಿಸಿಲ್ಲ. ಕೆಎಫ್‍ಡಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುತ್ತೇವೆಂದು ಸುಳ್ಳು ಭರವಸೆ ನೀಡಿದ್ದರು. ಅಭಿವೃದ್ಧಿ ನಿಂತ ನೀರಾಗಿದೆ. ಹಾಲಿ ಶಾಸಕರ ಸಾಧನೆ ಎಂದರೆ ಎಂಡಿಎಫ್, ಮಾರಿಕಾಂಬಾ ಸಮಿತಿ, ಸಿಗಂದೂರು ದೇವಸ್ಥಾನ ಇಬ್ಭಾಗ ಮಾಡಿದ್ದಾಗಿದೆ. ಬಂಗಾರಪ್ಪ ಅವರ ಕುಟುಂಬ ಒಡೆದರೂ ಸಮಾಧಾನಗೊಳ್ಳದ ಶಾಸಕರು ಈಗ ಕಾಗೋಡು ತಿಮ್ಮಪ್ಪ ಅವರ ಕುಟುಂಬವನ್ನು ಒಡೆದಿದ್ದಾರೆ. ಯಾವಾಗ ಯಡಿಯೂರಪ್ಪ ಕುಟುಂಬ ಒಡೆಯುತ್ತಾರೋ ಗೊತ್ತಿಲ್ಲ. ಹಾಲಪ್ಪನವರೇ ನೀವು ಇದೇ ರೀತಿ ಬೇರೆಯವರ ಕುಟುಂಬ ಒಡೆಯುತ್ತಾ ಹೋದರೆ ನಿಮ್ಮ ಕುಟುಂಬ ಸಹ ಒಡೆಯುವುದು ನಿಶ್ಚಿತ” ಎಂದು ಹೇಳಿದರು.

ಇದನ್ನೂ ಓದಿ: Shivamogga News: ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಚೇತನ್‌ರಾಜ್‌ ಕಣ್ಣೂರು; ಹಾಲಪ್ಪ ವಿರುದ್ಧ ಬೇಳೂರು ವಾಗ್ದಾಳಿ

“ಡಾ. ರಾಜನಂದಿನಿ ನನ್ನಿಂದ ತಂದೆಯವರಿಗೆ ಅವಮಾನವಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಗೋಡು ಸ್ಪರ್ಧೆ ಮಾಡಿದ್ದಾಗ 21 ದಿನ ಪ್ರಚಾರ ಮಾಡಿದ್ದೇನೆ. ತಂದೆ ಪರವಾಗಿ ನಾನು ಪ್ರಚಾರ ಮಾಡಿದಾಗ ಅವರಿಗೆ ಸ್ವಾಭಿಮಾನ ಅಡ್ಡ ಬಂದಿರಲಿಲ್ಲವೇ” ಎಂದು ಪ್ರಶ್ನಿಸಿದ ಬೇಳೂರು, “ಬಿಜೆಪಿ ಕೆಜೆಪಿ ಇಬ್ಭಾಗವಾದಾಗ ಹರತಾಳು ಹಾಲಪ್ಪ ಬಿಜೆಪಿಯನ್ನು ನೆಲಸಮ ಮಾಡುತ್ತೇನೆ ಎಂದು ಹೇಳಿದ್ದರು. ಅಂತಹವರನ್ನು ಬಿಜೆಪಿ ಹೇಗೆ ಒಪ್ಪಿಕೊಳ್ಳುತ್ತದೆ. ಬಿಜೆಪಿ ಒಡೆದ ಮನೆಯಾಗಿದೆ. ಸ್ಥಳೀಯವಾಗಿ ಬಿಜೆಪಿ ಪ್ರಮುಖರು, ಪರಿವಾರದವರು ಹಾಲಪ್ಪ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಅವರಿಗೆ ಕಣ್ಣೀರು ಹಾಕಿಸಿದ ಶಾಪ ಹರತಾಳು ಹಾಲಪ್ಪಗೆ ತಟ್ಟದೆ ಇರುವುದಿಲ್ಲ ಕಾಂಗ್ರೆಸ್‍ನಲ್ಲಿ ನಾವೆಲ್ಲ ಒಟ್ಟಾಗಿದ್ದು ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಗೆಲ್ಲುತ್ತೇವೆ” ಎಂದು ವಿಶ್ವಾಸದಿಂದ ಹೇಳಿದರು.

ಗೋಷ್ಠಿಯಲ್ಲಿ ಐ.ಎನ್. ಸುರೇಶಬಾಬು, ಚೇತನರಾಜ್ ಕಣ್ಣೂರು, ಗಣಪತಿ ಮಂಡಗಳಲೆ, ಮಧುಮಾಲತಿ, ಸುಮಂಗಲ ರಾಮಕೃಷ್ಣ, ಎನ್. ಲಲಿತಮ್ಮ, ಕೆ.ಎಲ್.ಭೋಜರಾಜ್, ಚಂದ್ರಪ್ಪ, ಹೊಳೆಯಪ್ಪ ಕೆ., ಅಣ್ಣಪ್ಪ, ಅನಿತಾ ಕುಮಾರಿ, ಗಣಾಧೀಶ್, ಅಶೋಕ ಬೇಳೂರು, ರವಿಕುಮಾರ್, ಡಿ.ದಿನೇಶ್, ಷಣ್ಮುಖ, ಅಣ್ಣಪ್ಪ ಭೀಮನೇರಿ, ವೆಂಕಟೇಶ್ ಇನ್ನಿತರರು ಹಾಜರಿದ್ದರು.

Exit mobile version