ರಿಪ್ಪನ್‌ಪೇಟೆ: ವಿಧಾನಸಭಾ ಚುನಾವಣೆಗೆ (Karnataka Election) ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಎಲ್ಲೆಡೆ ಜೋರಾಗಿ ಪ್ರಚಾರ ನಡೆಯುತ್ತಿದೆ. ಇದೇ ಹಿನ್ನೆಲೆ ಶಿವಮೊಗ್ಗದ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ (gopalakrishna belur) ಅವರು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಚನ್ನಬಸವ ಸ್ವಾಮೀಜಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಗೋಪಾಲಕೃಷ್ಣ (gopalakrishna belur) ಅವರು, “ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕಾಗೋಡು ತಿಮ್ಮಪ್ಪನವರು ಮಾಡಿದಂತಹ ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡಿದ್ದು ಎಂದು ಹೇಳಿಕೊಂಡು ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಹರತಾಳು ಹಾಲಪ್ಪ. ಮತದಾರರು ಹಾಲಪ್ಪನವರ ಸುಳ್ಳು ಭರವಸೆಗೆ ಮರಳಾಗದೇ ಈ ಬಾರಿ ಕಾಂಗ್ರೆಸ್ ಪಕ್ಷದ ಕಡೆಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ 140ಕ್ಕೂ ಅಧಿಕ ಸ್ಥಾನ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ 7 ಕ್ಷೇತ್ರದಲ್ಲಿ ಜಯಭೇರಿ ಸಾಧಿಸಲಿದೆ. ಈ ಬಾರಿ ರಾಜ್ಯದ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್‌ನದ್ದಾಗಲಿದೆ” ಎಂದರು.
ಇದನ್ನೂ ಓದಿ: Karnataka Election: ಕುಟುಂಬ ಒಡೆಯುತ್ತಿರುವ ಹಾಲಪ್ಪ ಸೋಲು ನಿಶ್ಚಿತ: ಬೇಳೂರು ಗೋಪಾಲಕೃಷ್ಣ
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಯಶೀಲಪ್ಪಗೌಡ ಹರತಾಳು ಮಾತನಾಡಿ, “ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಆಡಳಿತದಿಂದ ಮತದಾರರು ಬೇಸತ್ತು ಹೋಗಿದ್ದಾರೆ. ಪೆಟ್ರೋಲ್ ಡೀಸೆಲ್ ಸೇರಿದಂತೆ ದಿನ ಉಪಯೋಗಿ ಪಡಿತರ ವಸ್ತುಗಳ ಬೆಳೆ ಏರಿಕೆಯಿಂದ ಈಗಾಗಲೇ ಬಡವರು ಹಾಗೂ ಮಧ್ಯಮ ವರ್ಗದವರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಸರಿಯಾದ ಪಾಠ ಕಲಿಸಲಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪ ಹಾರೋಹಿತ್ತಲು, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿಗೌಡ, ಏರಿಗಿ ಉಮೇಶ್, ತುರಗೋಡು ನಾಗರಾಜ್, ಸಣ್ಣಕ್ಕಿ ಮಂಜ, ಇನ್ನಿತರ ಮುಖಂಡರು ಹಾಜರಿದ್ದರು.