Site icon Vistara News

Karnataka Election: ಬಿಜೆಪಿಗೆ ಬಹುಮತ ಕೊಟ್ಟು ಮೋದಿ ಅವರಿಗೆ ಬಲ ತುಂಬೋಣ: ಚಕ್ರವರ್ತಿ ಸೂಲಿಬೆಲೆ

ಕಾರ್ಯಕ್ರಮದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ

ಶಿವಮೊಗ್ಗ : “ಕಳೆದ ಎಂಟತ್ತು ವರ್ಷಗಳ ಹಿಂದೆ ಪ್ರಪಂಚವೇ ಭಾರತವನ್ನು ದುರ್ಬಲ ರಾಷ್ಟ್ರ ಎಂದು ಪರಿಗಣಿಸಿತ್ತು, ಆದರೀಗ ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ನಮ್ಮ ದೇಶ ಬೆಳೆದು ನಿಂತಿದೆ. ಹಾಗಾಗಿ ನರೇಂದ್ರ ಮೋದಿ ಅವರನ್ನು ಬಲಪಡಿಸಲು ಕರ್ನಾಟಕದಲ್ಲಿ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರವನ್ನು (Karnataka Election) ನೀಡೋಣ” ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

ನಗರದ ವಿನೋಬನಗರ ಸೋಮಿನಕೊಪ್ಪ ರಸ್ತೆಯ ಸರ್ಜಿ ಇನ್ಸ್‌ಟಿಟ್ಯೂಟ್‌ನಲ್ಲಿ ಸೋಮವಾರ ಬೆಳಗ್ಗೆ ಜನಹಿತ ಟ್ರಸ್ಟ್‌ ಹಾಗೂ ಮತದಾರರ ಜಾಗೃತ ವೇದಿಕೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Karnataka Election: ಬೇಲ್‌ ಮೇಲಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಡಿ.ಕೆ. ಶಿವಕುಮಾರ್: ಜೆ.ಪಿ. ನಡ್ಡಾ

“ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಚುನಾವಣಾ ಪ್ರವಾಸ ಕೈಗೊಂಡ ಮೇಲೆ ಕರ್ನಾಟಕದಲ್ಲಿ ನಿಜವಾದ ಕರೆಂಟ್‌ ಪಾಸ್‌ ಆದಂತಾಗಿದೆ. ಬೇರೆ ಪಕ್ಷಗಳಿಗೆ ಭಯ ಹುಟ್ಟಿದೆ. ಹಾಗಾಗಿ ದಿನಕ್ಕೊಂದು ಪೊಳ್ಳು ಭರವಸೆಗಳನ್ನು ನೀಡುತ್ತಾ ಜನರ ಕಣ್ಣಿಗೆ ಮಣ್ಣೆರೆಚುತ್ತಿವೆ. ಆದರೆ, ಪ್ರಜ್ಞಾವಂತ ಮತದಾರರು ಕಿವಿಗೊಡದೇ ಜನರಿಗೆ ಸ್ಪಂದಿಸುವ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರು

“ಕಳೆದ ಎಂಟು ಹತ್ತು ವರ್ಷಗಳ ಹಿಂದೆ ರಾಜಕಾರಣವೆಂದರೆ ಜನರಲ್ಲಿ ವಾಕರಿಕೆ ಮನೋಭಾವ ಇತ್ತು. ಆದರೀಗ ನರೇಂದ್ರ ಮೋದಿಯಂತಹ ನಾಯಕರಿದ್ದರೆ ದೇಶ ಸದೃಢವಾಗಿರಬಲ್ಲದು ಎಂಬ ನಂಬಿಕೆ ಜನರಲ್ಲಿ ಮೂಡಿದೆ. ನರೇಂದ್ರ ಮೋದಿಯವರನ್ನು ಕೈ ಬಲ ಪಡಿಸಿದರೆ ಭಾರತವನ್ನು ಗಟ್ಟಿ ಮಾಡಿದಂತೆ” ಎಂದರು.

ಇದನ್ನೂ ಓದಿ: Karnataka Election: ಅಂಕೋಲಾದಲ್ಲಿ ಕಾಂಗ್ರೆಸ್‌ಗೆ ಬಿಗ್‌ ಶಾಕ್‌: ಮಾಜಿ ಶಾಸಕರ ಪುತ್ರ ಬಿಜೆಪಿ ಸೇರ್ಪಡೆ

ಬಿಜೆಪಿ ಮುಖಂಡರಾದ ಡಾ.ಧನಂಜಯ ಸರ್ಜಿ ಮಾತನಾಡಿ, “ಕಾಂಗ್ರೆಸ್‌ ಪಕ್ಷವು ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಪ್ರಜ್ಞಾವಂತ ಮತದಾರರು ದೇಶದ ಪ್ರಗತಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು. ಗುಡಿಸಿದರೆ ಕಸವಿರಬಾರದು, ಬಡಿಸಿದರೆ ಹಸಿವಿರಬಾರದು, ಓಟು ಹಾಕಿದರೆ ಕಾಂಗ್ರೆಸ್‌ ಇರಬಾರದು. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಮತದಾರರು ಜಾಗೃತರಾಗುವ ಮೂಲಕ ಅಭ್ಯರ್ಥಿ ಚನ್ನಬಸಪ್ಪ ಅವರನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು. ಇದೇ ವೇಳೆ ಸಾರ್ವಜನಿಕರು ಸರ್ಕಾರದ ಬಗ್ಗೆ ಪ್ರಶ್ನೆ ಕೇಳುವ ಮೂಲಕ ಸಂದೇಹಗಳನ್ನು ಬಗೆಹರಿಸಿಕೊಂಡರು.

Exit mobile version