ಸೊರಬ: ಸೊರಬ ವಿಧಾನಸಭಾ ಕ್ಷೇತ್ರದಲ್ಲಿ (Karnataka Election) ಸಮಾಜವಾದಿ ಪಾರ್ಟಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿ.ಜಿ. ಪರಶುರಾಮ್ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಅವರ ವಿರುದ್ಧ ಸೊರಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 20ರಂದು ಪರಶುರಾಮ್ ಅವರು ಸಮಾಜವಾದಿ ಪಕ್ಷದಿಂದ ತಮ್ಮ ನಾಮಪತ್ರ ಸಲ್ಲಿಸಲು ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆಯ ಮೂಲಕ ತಾಲೂಕು ಕಚೇರಿಯವರೆಗೆ ಮೆರವಣಿಗೆ ಮಾಡಿದ್ದರು. ಈ ವೇಳೆ ಪ್ರಚಾರದ ಕರಪತ್ರದಲ್ಲಿ ಧಾರ್ಮಿಕತೆಯನ್ನು ಬಿಂಬಿಸುವಂತಹ ಚಂದ್ರಗುತ್ತಿಯ ರೇಣುಕಾಂಬೆ ಮತ್ತು ಪರಮೇಶ್ವರ ದೇವರುಗಳ ಫೋಟೊವನ್ನು ಮುದ್ರಿಸಲಾಗಿತ್ತು.
ಇದು ಚುನಾವಣಾ ನೀತಿ ಸಂಹಿತೆಯ ವಿರುದ್ಧವಾಗಿದೆ. ಯಾವುದೇ ಪಕ್ಷದ ಮತ್ತು ಪಕ್ಷೇತರ ಅಭ್ಯರ್ಥಿಗಳು ಕರಪತ್ರ ಮತ್ತು ಫ್ಲಕ್ಸ್‌ಗಳಲ್ಲಿ ದೇವರ ಭಾವಚಿತ್ರ ಮತ್ತು ಹೆಸರನ್ನು ಬಳಸಿಕೊಳ್ಳುವಂತಿಲ್ಲ ಎಂದು ನೀತಿ ಸಂಹಿತೆಯಲ್ಲಿದೆ. ಇದೂ ಅಲ್ಲದೇ ಕರಪತ್ರದಲ್ಲಿ ಮುದ್ರಣಾಲಯದ ಹೆಸರು, ಪ್ರತಿಗಳು ಮತ್ತು ಪ್ರಕಟಣೆ ಮಾಡುವವರು ಹೆಸರು ಯಾವುದೂ ಇರಲಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ದೇವರ ಫೋಟೋ ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.
ಇದನ್ನೂ ಓದಿ: Karnataka Election: ಸೊರಬದಿಂದ ನಮ್ಮ ಸ್ಪರ್ಧೆ ಇಲ್ಲ; ಬಿಜೆಪಿ ಸೋಲಿಸುವುದೇ ನಮ್ಮ ಉದ್ದೇಶವೆಂದ ನಮೋ ವೇದಿಕೆ
ಈ ಬಗ್ಗೆ ಎಚ್ಚೆತ್ತುಕೊಂಡ ಚುನಾವಣಾಧಿಕಾರಿಗಳು ಸೊರಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿ.ಜಿ. ಪರಶುರಾಮ್ ವಿರುದ್ಧ ಸೊರಬ ಪಿಎಸ್‍ಐ ನಾಗರಾಜ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.