ಬೆಂಗಳೂರು: ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಶನಿವಾರವೂ ಇತ್ಯರ್ಥವಾಗಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಒಂದು ಸೂತ್ರವನ್ನು ಮುಂದಿಟ್ಟಿದ್ದು, ಒಬ್ಬರಿಗೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದರೆ, ಮತ್ತೊಬ್ಬರಿಗೆ ಮುಂದೆ ವಿಧಾನ ಪರಿಷತ್‌ಗೆ ಟಿಕೆಟ್ ನೀಡಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ. ಈ ಮೂಲಕ ಸಂಧಾನ ಸೂತ್ರವನ್ನು ಮುಂದಿಟ್ಟಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಬೆಂಗಳೂರು ನಿವಾಸದಲ್ಲಿ ಸಭೆ ನಡೆದಿದ್ದು, ಆರ್.ಎಂ.ಮಂಜುನಾಥ ಮತು ಕಿಮ್ಮನೆ ಬಣದ ತಲಾ 20 ಜನರನ್ನು ಕರೆಸಿ ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ: Murder case: ತೀರ್ಥಹಳ್ಳಿ ಮೀನು ಮಾರುಕಟ್ಟೆಯಲ್ಲಿ ರಕ್ತದ ಮಡುವಿನಲ್ಲಿ ಪೊಲೀಸ್ ಶವ ಪತ್ತೆ; ಕೊಲೆ ಶಂಕೆ
ಶನಿವಾರ ಮಧ್ಯಾಹ್ನದ ನಂತರ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಎರಡು ಗುಂಪಿನ ಚರ್ಚೆ ನಡೆದಿದೆ. ಈ ಚರ್ಚೆಯಲ್ಲಿ ಯಾವುದೇ ಗುಂಪಿಗೆ ಯಾವುದೇ ಭರವಸೆಯನ್ನು ನೀಡಲಾಗಿಲ್ಲ. “ಆರ್.ಎಂ. ಮಂಜುನಾಥ ಗೌಡರಿಗೆ 2004ರಲ್ಲಿಯೇ ಟಿಕೆಟ್ ದೊರೆಯಬೇಕಿತ್ತು. ಆದರೆ ಆಗ ಪಕ್ಷದ ತೀರ್ಮಾನದಂತೆ ಮಂಜುನಾಥ ಗೌಡರನ್ನು ಸಮಾಧಾನಪಡಿಸಿ ಕಿಮ್ಮನೆ ರತ್ನಾಕರ್ ಅವರಿಗೆ ಟಿಕೆಟ್ ನೀಡಲಾಯಿತು. ಅವರು ತಮಗೆ ನೀಡಿದ ನಾಲ್ಕು ಅವಕಾಶದಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಪಕ್ಷ ಅವರಿಗೆ ಸಚಿವ ಸ್ಥಾನ ನೀಡಿ ಗೌರವಿಸಿದೆ. ಹಾಗೆ ನೋಡಿದರೆ ಮಂಜುನಾಥ ಗೌಡರಿಗೆ ರಾಜಕೀಯವಾಗಿ ಅನ್ಯಾಯವಾಗಿದೆ. ರಾಜಕೀಯ ಷಡ್ಯಂತರದ ಫಲವಾಗಿ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ವಜಾಗೊಳ್ಳಬೇಕಾಯಿತು. ತೆರಿಗೆ ದಾಳಿ ಇಂತಹ ಅವಮಾನಗಳನ್ನು ಅನುಭವಿಸಿದ್ದಾರೆ. ಅವರ ಕೊಡುಗೆಯೂ ಪಕ್ಷಕ್ಕೆ ಅಗತ್ಯವಿದೆ” ಎಂದು ಡಿಕೆಶಿ ಚರ್ಚೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಈಗ ಪ್ರಬಲ ಎದುರಾಳಿಯಾಗಿರುವ ಆರಗ ಜ್ಞಾನೇಂದ್ರ ಅವರನ್ನು ಸೋಲಿಸುವುದೇ ಪಕ್ಷದ ಮುಖ್ಯ ಗುರಿ. ಅದಕ್ಕಾಗಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ತೀರ್ಥಹಳ್ಳಿಯಲ್ಲಿ ಬಹಿರಂಗವಾಗಿಯೇ ನೀಡಿದ ವಾಗ್ದಾನದಂತೆ ಒಬ್ಬರಿಗೆ ಎಂಎಲ್‌ಎ ಟಿಕೆಟ್ ಹಾಗೂ ಮತ್ತೊಬ್ಬರನ್ನು ಎಂಎಲ್‌ಸಿ ಮಾಡುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.
ವಿನಾಕಾರಣ ಗುಂಪುಗಾರಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಗೊಂದಲ ಮೂಡಿಸಿ ಎದುರಾಳಿಗಳ ಟೀಕೆ ಟಿಪ್ಪಣಿಗೆ ಅವಕಾಶ ಮಾಡಿಕೊಡಬಾರದು ಎಂದು ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಟಿಕೆಟ್ ವಿಚಾರ ಅಧ್ಯಕ್ಷರ ತೀರ್ಮಾನಕ್ಕೆ ಬಿಟ್ಟಿದ್ದೇವೆ
ಒಬ್ಬರಿಗೆ ವಿಧಾನಸಭೆ, ಒಬ್ಬರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಇಬ್ಬರೂ ಒಗ್ಗಟ್ಟಾಗಿ ಹೋಗಿ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ನನ್ನ ಬೇಡಿಕೆಯಂತೆ ಈ ಬಾರಿ ತೀರ್ಥಹಳ್ಳಿ ಟಿಕೆಟ್ ಅನ್ನು ನನಗೇ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ಟಿಕೆಟ್ ವಿಚಾರವನ್ನು ಅಧ್ಯಕ್ಷರ ತೀರ್ಮಾನಕ್ಕೆ ಬಿಟ್ಟಿದ್ದೇವೆ. ನಾಲ್ಕನೇ ತಾರೀಖು ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಒಕ್ಕಲಿಗರ ಕ್ಷೇತ್ರ ಆಗಿರುವುದರಿಂದ ಡಿಕೆಶಿ ಅವರಿಗೆ ತೀರ್ಮಾನಿಸಲು ಬಿಟ್ಟಿದ್ದೇವೆ. ಎಂದು ತೀರ್ಥಹಳ್ಳಿ ಟಿಕೆಟ್ ಆಕಾಂಕ್ಷಿ ಮಂಜುನಾಥ್ ಗೌಡ ಹೇಳಿದ್ದಾರೆ.
ಮಂಜುನಾಥ್ ಗೌಡರೇ ನೀವು ಮನೆಗೆ ಹೋಗಿ ಅಂದರೆ ಹೋಗುತ್ತೇನೆ. ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ. ಈ ಸಲ ನಾವು ಗೆಲ್ಲುವುದರಲ್ಲಿ ಅನುಮಾನ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Election 2023: ಬೊಮ್ಮಾಯಿ, ಬಿ.ಸಿ. ಪಾಟೀಲ್, ಶ್ರೀರಾಮುಲು ಸೇರಿ ಹಲವರಿಗೆ ಬಿಜೆಪಿ ಟಿಕೆಟ್ ಫಿಕ್ಸ್
ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದೇವೆ- ಕಿಮ್ಮನೆ
ನಾನು ಒಂದಲ್ಲ, ಮೂರು ಮೆಟ್ಟಿಲು ಇಳಿಯೋಕೆ ರೆಡಿ. ಸಭೆಯಲ್ಲಿ ನಮ್ಮಿಬ್ಬರ ಕಡೆಯಿಂದಲೂ ಒಂದೇ ಪ್ರತಿಕ್ರಿಯೆ ಬಂದಿದೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದೇವೆ. ಒಗ್ಗಟ್ಟಾಗಿ ಕೆಲಸ ಮಾಡೋದಾಗಿ ಹೇಳಿದ್ದೇವೆ. ಯಾರ ವಕ್ರದೃಷ್ಟಿ ಬಿದ್ದಿದ್ಯೋ ಗೊತ್ತಿಲ್ಲ. ಎಲ್ಲವನ್ನೂ ಹೇಳೋಕೆ ನಾನು ಜ್ಯೋತಿಷ್ಯ ಕಲಿಬೇಕಷ್ಟೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.