ತೀರ್ಥಹಳ್ಳಿ: ವಿಧಾನಸಭಾ ಚುನಾವಣೆಯ (Karnataka Election) ರಂಗು ಎಲ್ಲೆಡೆ ಹೆಚ್ಚಲಾರಂಭಿಸಿದೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಾರ್ಪೋರೇಟರ್ ಚನ್ನಬಸಪ್ಪ ಸ್ಪರ್ಧಿಸುತ್ತಿದ್ದರೆ, ಆಯನೂರು ಮಂಜುನಾಥ್ (Ayanur Manjunath) ಅವರು ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಆಯನೂರು ಮಂಜುನಾಥ್ (Ayanur Manjunath) ಗೆಲ್ಲುವುದು ದೂರವಿರಲಿ ಅವರ ಠೇವಣಿ ಕೂಡ ಉಳಿಯುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾಗಿರುವ ಡಿ.ಎಸ್. ಅರುಣ್ (D S Arun) ಹೇಳಿದ್ದಾರೆ.
ಬಿಜೆಪಿ ಪಕ್ಷದ ವತಿಯಿಂದ ತೀರ್ಥಹಳ್ಳಿ ಬಂಟರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಂಜುನಾಥ್ ಈ ಹಿಂದೆ ಗೆದ್ದಿರುವುದು ಬಿಜೆಪಿ ಎನ್ನುವ ಕಾರಣಕ್ಕೆ ಹೊರೆತು ಅವರ ವೈಯುಕ್ತಿಕ ಹೆಸರಿನಿಂದ ಅಲ್ಲ. ಈ ಬಾರಿ ಅವರ ಸ್ಪರ್ಧೆಯಿಂದ ಬಿಜೆಪಿಗೆ ಗೆಲುವು ಸುಲಭವಾಗಲಿದೆ. ಏಕೆಂದರೆ ಅವರು ಕಸಿಯುವುದು ಕಾಂಗ್ರೆಸ್ ಮತಗಳನ್ನಾಗಿದೆ. ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ. ಶಿವಮೊಗ್ಗದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲಲಿದೆ” ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, “ಕಾಂಗ್ರೆಸ್ ಸೋಲಿನ ಭಯದಿಂದ ಗ್ಯಾರಂಟಿ ಕಾರ್ಡ್ ತೋರಿಸಿ ಜನರನ್ನು ಮರಳು ಮಾಡುತ್ತಿದೆ. ಇದು ಆಗದ ಕೆಲಸ. ಮುಳುಗಡೆ ಸಮಸ್ಯೆ ತೀರಾ ಹಳೆಯದು ಅದನ್ನು ಬಗೆಹರಿಸಲು ಬಿಜೆಪಿ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಿದೆ. ಅಲ್ಲದೆ ಭದ್ರಾವತಿಯಲ್ಲಿ ಹೊಸ ಉದ್ಯೋಗ ಸೃಷ್ಟಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬದ್ಧವಾಗಿವೆ” ಎಂದರು.
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನಾಗರಾಜ್ ಶೆಟ್ಟಿ, ಬಾಳೆಬೈಲು ರಾಘವೇಂದ್ರ, ಬೇಗುವಳ್ಳಿ ಸತೀಶ, ಆರ್ ಮದನ್, ಸಿ ಬಿ ಈಶ್ವರ್, ಬೇಗುವಳ್ಳಿ ಕವಿರಾಜ್ ಉಪಸ್ಥಿತರಿದ್ದರು.