ರಿಪ್ಪನ್‌ಪೇಟೆ: “ಕಳೆದ ಹತ್ತು ವರ್ಷ ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ಶಾಸನ ಸಭೆಯಲ್ಲಿ 5 ನಿಮಿಷಗಳಷ್ಟು ಮಾತನಾಡದವರು ಈಗ ಪುನಃ ಚುನಾವಣೆಗೆ (Karnataka Election) ಸ್ಪರ್ಧಿಸಿದ್ದಾರೆ. ಈಗ ಗೆದ್ದು ಏನು ಮಾಡಿಯಾನು?” ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ (H Halappa Harathalu) ಅವರು ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು (Belur Gopalakrishna) ಮೇಲೆ ಏಕವಚನದಲ್ಲಿಯೇ ಹರಿಹಾಯ್ದರು.
ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬಾಳೂರು-ಕೆಂಚನಾಲ-ಅರಸಾಳು-ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದೊಂದಿಗೆ ಮನೆ ಮನೆಗೆ ಭೇಟಿ ಸಂದರ್ಭದಲ್ಲಿ ಅರಸಾಳು ಗ್ರಾಮದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
“ಈಗ ಮತದಾರರ ಮುಂದೆ ಮೊಸಳೆ ಕಣ್ಣೀರು ಹಾಕುತ್ತಾ ಹಗಲು ವೇಷ ಮಾಡುತ್ತಿದ್ದಾನೆ. ಅವನ ಈ ನಾಟಕವನ್ನು ಜನರು ತಿರಸ್ಕರಿಸುವ ಮೂಲಕ ಬಿಜೆಪಿಗೆ ಬೆಂಬಲಿಸಿ, ಮತ ನೀಡಿ ಅಭಿವೃದ್ಧಿಗೆ ಆದ್ಯತೆ ನೀಡಿ” ಎಂದು ಮನವಿ ಮಾಡಿದರು. “ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರರನ್ನು ಜೈಲಿಗೆ ಕಳುಹಿಸುತ್ತೇನೆ. ದೇಶದ ಪ್ರಧಾನಿಯನ್ನು ಗುಂಡಿಕ್ಕಿ ಎಂದಿದ್ದ ಅವರದ್ದು ನಾಲಿಗೆಯೋ ಅಥವಾ ಬೇರಿನ್ನೇನು? ಬಿ.ವೈ. ರಾಘವೇಂದ್ರರವರು ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವುದರ ಜತೆಗೆ ವಿಮಾನ ನಿಲ್ದಾಣವನ್ನು ಮಾಡಿದರು. ಈತ ಏನು ಮಾಡಿದ್ದಾನೆಂದು ಬಹಿರಂಗವಾಗಿ ಹೇಳಿಕೊಳ್ಳಲಿ” ಎಂದು ಸವಾಲು ಹಾಕಿದರು.
“ಬಿ.ಎಸ್.ಯಡಿಯೂರಪ್ಪ ಬರೀ ಲಿಂಗಾಯತ ನಾಯಕರಾಗದೇ ಸರ್ವ ಜನಾಂಗದ ನಾಯಕರು. ಅವರು ಲಿಂಗಾಯತರಿಲ್ಲದ ಮಂಗಳೂರು, ಕುಂದಾಪುರ, ಬೈಂದೂರು ಕಡೆ ಹೋದರೂ ಸಹ ಬೇರೆ ಸಮುದಾಯದವರು ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಾರೆ. ಬರೀ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಅನುದಾನ ಕೊಡದೇ ನಮ್ಮ ಈಡಿಗ ಸಮಾಜದ ಮಠಕ್ಕೂ 5 ಕೋಟಿ ರೂ. ಹಣವನ್ನು ಕೊಡಿಸಿದ್ದಾರೆ. ಸಣ್ಣ ಸಣ್ಣ ಜಾತಿ ಪಗಂಡದವರಿಗೂ ಅನುದಾನ ಕೊಡಿಸಿದ್ದಾರೆ. ಅಭಿವೃದ್ದಿಯೇ ನಮ್ಮ ಮೂಲ ಮಂತ್ರವಾಗಿದ್ದು ಮತದಾರರನ್ನು ಪ್ರೀತಿ ವಿಶ್ವಾಸದಿಂದ ಕಾಣಲು ಶಾಸಕನಾಗಬೇಕಾಗಿಲ್ಲ ನಮ್ಮ ಹೃದಯಾಂತರಾಳದಲ್ಲಿದ್ದರೆ ಸಾಕು” ಎಂದು ತಿರುಗೇಟು ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ ಮಾತನಾಡಿ, “ಬೇಳೂರು ಗೋಪಾಲಕೃಷ್ಣ ಒಬ್ಬ ನಾಲಾಯಕ್ ಶಾಸಕ. ಅಂತಹವರನ್ನು ಆಯ್ಕೆ ಮಾಡುವ ಬದಲು ಅಭಿವೃದ್ಧಿಯ ಹರಿಕಾರ, ಕ್ಷೇತ್ರದ ಸಮಸ್ಯೆಗಳ ಕುರಿತು ಹೋರಾಟ ನಡೆಸಿ ಅನುಷ್ಠಾನಗೊಳಿಸುವಂತಹ ವ್ಯಕ್ತಿ ಹರತಾಳು ಹಾಲಪ್ಪನವರನ್ನು ಬೆಂಬಲಿಸಿ” ಎಂದು ಮನವಿ ಮಾಡಿದರು.
ಇದೇ ವೇಳೆ ಚುನಾವಣೆ ಫಲಿತಾಂಶ ಬಂದ ಆರು ತಿಂಗಳಲ್ಲಿ ಆರಸಾಳು ರೈಲ್ವೆ ನಿಲ್ದಾಣದಲ್ಲಿ ಎಲ್ಲ ರೈಲುಗಳನ್ನು ನಿಲುಗಡೆ ಮಾಡುವ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಶಾಸಕ ಹರತಾಳು ಹಾಲಪ್ಪ ನೀಡಿದರು.
ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿ, ಬಿಜೆಪಿ ಮಂಡಲದ ಅಧ್ಯಕ್ಷ ಗಣಪತಿ ಬೆಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ್, ಜಿ.ಪಂ ಮಾಜಿ ಸದಸ್ಯೆ ಟಿ. ನಾಗರತ್ನ, ಹುಸೇನ್‌ಸಾಬ್, ಘಟಕದ ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ ಸುರೇಶ್‌ಸಿಂಗ್, ದೇವೇಂದ್ರಪ್ಪ ಗೌಡ, ರಾಮಚಂದ್ರಪ್ಪ ಹರತಾಳು, ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: Karnataka Election: ಧರ್ಮಾಧಾರಿತ ಮೀಸಲಾತಿ ತಪ್ಪು ಎಂದ ಶೋಭಾ ಕರಂದ್ಲಾಜೆ; ಇದು ಅಜ್ಞಾನದ ಮಾತು ಎಂದ ದಿನೇಶ್ ಗುಂಡೂರಾವ್
ಇದೇ ಸಂದರ್ಭದಲ್ಲಿ ನೂರಾರು ಯುವಕರು ಶಾಸಕ ಹರತಾಳು ಹಾಲಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.