Site icon Vistara News

Karnataka Election: ಬೇಳೂರು ಗೋಪಾಲಕೃಷ್ಣ ಮಾಡಿರುವ ದೌರ್ಜನ್ಯ ಮರೆಯುವಂಥದ್ದಲ್ಲ: ಶಾಸಕ ಹರತಾಳು ಹಾಲಪ್ಪ

#image_title

ಸಾಗರ: “ನನ್ನ ಮೇಲೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ (Karnataka Election) ನನಗೆ ಕಣ್ಣೀರು ಹಾಕಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ ಅದರಲ್ಲಿ ಅವರು ಯಶಸ್ಸು ಕಂಡಿರಲಿಲ್ಲ. ಎರಡು ಬಾರಿ ಸಾಗರ ಕ್ಷೇತ್ರದ ಶಾಸಕರಾಗಿ ವಿಧಾನಸೌಧದಲ್ಲಿ ಮಾತನಾಡದೆ, ಕ್ಷೇತ್ರವ್ಯಾಪ್ತಿಯಲ್ಲಿ ಅವರಿವರ ಮೇಲೆ ದೌರ್ಜನ್ಯ ಮಾಡಿಸುವಲ್ಲಿಯೇ ತಮ್ಮ ಅಧಿಕಾರ ಅವಧಿ ಮುಗಿಸಿದ್ದರು” ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಆರೋಪಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಂಡ ನೂರಕ್ಕೂ ಹೆಚ್ಚು ಜನರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿ, “ನನ್ನ ಐದು ವರ್ಷದ ಅವಧಿಯಲ್ಲಿ ಒಂದು ಹೊಡೆದಾಟ ಪ್ರಕರಣ ನಡೆದಿಲ್ಲ. ರೈತರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಲು ಬಿಟ್ಟಿಲ್ಲ” ಎಂದರು.

“ಗೋಪಾಲಕೃಷ್ಣ ಬೇಳೂರು ಶಾಸಕರಾಗಿದ್ದಾಗ ಕಾಗೋಡು ತಿಮ್ಮಪ್ಪ, ಬಿ.ಆರ್.ಜಯಂತ್, ಭೀಮನೇರಿ ಶಿವಪ್ಪ, ತೀ.ನ. ಶ್ರೀನಿವಾಸ್, ಕೆ.ಹೊಳೆಯಪ್ಪ ಸೇರಿದಂತೆ ಅನೇಕ ಜನರನ್ನು ಹೊಡೆಸಿ ಅವರಿಗೆ ಕಣ್ಣೀರು ಹಾಕಿಸಿದ್ದಾರೆ. ಸ್ವತಃ ಕಾಗೋಡು ತಿಮ್ಮಪ್ಪ ಕಂಸ, ಅವರನ್ನು ಧ್ವಂಸ ಮಾಡುತ್ತೇನೆ ಎಂದು ಕೇವಲವಾಗಿ ಮಾತನಾಡಿದ್ದರು. ಇದೀಗ ಕಾಗೋಡು ತಿಮ್ಮಪ್ಪ ಅವರನ್ನು ಭೀಷ್ಮ ಎಂದು ಹೇಳಿ ಪ್ರಚಾರ ಮಾಡುತ್ತಿದ್ದಾರೆ. ತಿಮ್ಮಪ್ಪ ಅವರು ನಿಜವಾಗಿಯೂ ರಾಜಕೀಯ ಭೀಷ್ಮ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಭೀಷ್ಮರಂತಿರುವ ಕಾಗೋಡು ತಿಮ್ಮಪ್ಪ ದ್ರೋಣಾಚಾರ್ಯರಂತಿರುವ ಬಿ.ಆರ್.ಜಯಂತ್ ಉಪ್ಪಿನ ಋಣ ತೀರಿಸಲು ಕಾಂಗ್ರೆಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಂತಿಮ ಜಯ ಕುರುಕ್ಷೇತ್ರದಲ್ಲಿ ಪಾಂಡವರದ್ದಾಗಿರುವಂತೆ ಸಾಗರ ಕ್ಷೇತ್ರದಲ್ಲಿ ಸಹ ಬಿಜೆಪಿ ಗೆಲುವು ದಾಖಲಿಸಲಿದೆ” ಎಂದು ವ್ಯಾಖ್ಯಾನಿಸಿದರು.

“ಬಿಜೆಪಿ ಅಭಿವೃದ್ಧಿ ಅಜೆಂಡಾ ಇರಿಸಿಕೊಂಡು ಚುನಾವಣೆ ಎದುರಿಸುತ್ತಿದೆ. ಬಿಜೆಪಿ ಸರ್ಕಾರ ಕ್ಷೇತ್ರದ ಎಲ್ಲ ಜಾತಿಜನಾಂಗಗಳ ಹಿತರಕ್ಷಣೆ ಮಾಡಿದೆ. ಎಲ್ಲ ಸಮುದಾಯಗಳ ಸಭಾಭವನಕ್ಕೆ ಅನುದಾನ ಕೊಟ್ಟಿದೆ. ಈಡಿಗ ಸಮುದಾಯಕ್ಕೆ ಎಲ್ಲ ಸಮುದಾಯಕ್ಕಿಂತ ಒಂದು ಮುಷ್ಟಿ ಹೆಚ್ಚು ಅನುದಾನ ನೀಡಿದೆ. ಯಾರೂ ಅಪಪ್ರಚಾರ ಮಾಡಿದರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ಸಂಘಟಿತರಾಗಿ ಕೆಲಸ ಮಾಡೋಣ. ಪ್ರಸ್ತುತ ಕ್ಷೇತ್ರವ್ಯಾಪ್ತಿಯಲ್ಲಿ ಬಿಜೆಪಿ ಪರವಾದ ವಾತಾವರಣ ಇದ್ದು ಯಾರು ಎಷ್ಟೇ ಪ್ರಯತ್ನಿಸಿದರೂ ಗೆಲುವು ನಮ್ಮದೆ” ಎಂದು ಹೇಳಿದರು.

ಡಾ. ರಾಜನಂದಿನಿ ಕಾಗೋಡು ಮಾತನಾಡಿ, “ನಮ್ಮ ತಂದೆಯವರಾದ ಕಾಗೋಡು ತಿಮ್ಮಪ್ಪ ಅವರು ನನ್ನನ್ನು ಸೇರಿದಂತೆ ಕಲಗೋಡು, ಹೊನಗೋಡು, ಬಿ.ಆರ್.ಜಯಂತ್, ಮಲ್ಲಿಕಾರ್ಜುನ ಹಕ್ರೆ ಪರವಾಗಿ ಟಿಕೆಟ್ ಕೇಳಿದ್ದರು. ಆದರೆ ಹೈಕಮಾಂಡ್ ಎಲ್ಲರನ್ನೂ ದೂರವಿಟ್ಟು ಬೇಳೂರಿಗೆ ಟಿಕೆಟ್ ನೀಡಿದೆ. ಎರಡು ಬಾರಿ ಶಾಸಕರಾಗಿದ್ದಾಗ ನಮ್ಮ ತಂದೆಯವರ ಬಗ್ಗೆ ಹೀನಾಯವಾಗಿ ಮಾತನಾಡಿದ್ದು, ಹಲ್ಲೆಗೆ ಪ್ರಯತ್ನಿಸಿದ್ದು ಮರೆಯಲು ಆಗುತ್ತಿಲ್ಲ. ಸಹೋದರ ಪ್ರಶಾಂತ್ ಅವರ ಮೇಲೆ ದೌರ್ಜನ್ಯ ಮಾಡಿದ್ದಾರೆ. ನಾನು ಆರೋಗ್ಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ನನ್ನನ್ನು ಬೆಂಬಲಿಗರ ಮೂಲಕ ಅಡ್ಡಗಟ್ಟಿಸಿ ಹೆದರಿಸುವ ಪ್ರಯತ್ನ ನಡೆಸಿದರು. ಇಂತಹವರ ಪರವಾಗಿ ಮತಯಾಚನೆ ಮಾಡಲು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಪಕ್ಷ, ಪಾರ್ಟಿ ಮೀರಿ ನಾನು ಮತ್ತು ನಮ್ಮ ತಂದೆ ಮನೆಯಲ್ಲಿ ಅನೋನ್ಯವಾಗಿದ್ದೇವೆ” ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, “ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಬಿಜೆಪಿ ಪರವಾದ ವಾತಾವರಣ ಇದ್ದು 30 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಹರತಾಳು ಹಾಲಪ್ಪ ಗೆಲ್ಲುತ್ತಾರೆ. ಪಕ್ಷ ತೊರೆದು ಹೋದವರು ತಮ್ಮನ್ನು ಪ್ರತಿನಿಧಿಸುವ ನಾಯಕತ್ವ ಯಾರದ್ದು ಎಂದು ನೋಡಿ ಹೋಗಬೇಕಾಗಿತ್ತು. ಎರಡು ಬಾರಿ ಶಾಸಕರಾಗಿದ್ದಾಗ ಮಾಡಿರುವ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಮುಂದೆ ಗೆದ್ದು ಬಂದರೂ ಇವರು ಇದೇ ಸಂಸ್ಕೃತಿಯನ್ನು ಮುಂದುವರಿಸುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: Karnataka Elections 2023 : ಸಾಗರದಲ್ಲಿ ಕೆಆರ್‌ಎಸ್‌ ಪಕ್ಷದಿಂದ ಚುನಾವಣಾ ಕಣಕ್ಕಿಳಿದ ಟೆಕ್ಕಿ ಅಬ್ಬಿ ಕಿರಣ್‌

ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಪ್ರಕಾಶ್ ಲ್ಯಾವಿಗೆರೆ ಸೇರಿದಂತೆ ನೂರಾರು ಪ್ರಮುಖರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಗಣೇಶಪ್ರಸಾದ್, ಲೋಕನಾಥ್ ಬಿಳಿಸಿರಿ, ರಾಕೇಶ್ ನೈನಿವಾಲ್, ಭರ್ಮಪ್ಪ ಅಂದಾಸುರ, ಪ್ರಶಾಂತ್ ಕೆ.ಎಸ್., ರಮೇಶ್, ಭೈರಪ್ಪ, ಕುಪೇಂದ್ರ ರೆಡ್ಡಿ, ಬಿ.ಸಿ.ಲಕ್ಷ್ಮೀನಾರಾಯಣ್, ಮಧುರಾ ಶಿವಾನಂದ್ ಇನ್ನಿತರರು ಹಾಜರಿದ್ದರು.

Exit mobile version