ಸೊರಬ: “ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (BJP National President J P Nadda )0 ಅವರು ವಿಧಾನಸಭಾ ಚುನಾವಣೆಯ (Karnataka Election) ಪ್ರಚಾರದ ನಿಮಿತ್ತ ಏ. 27ರಂದು ಮಧ್ಯಾಹ್ನ 1 ಗಂಟೆಗೆ ಸೊರಬ ಪಟ್ಟಣಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅವರ ಸ್ವಾಗತಕ್ಕೆ ಕಾರ್ಯಕರ್ತರ ತಂಡ ಉತ್ಸಾಹದಿಂದ ಕಾಯುತ್ತಿದೆ” ಎಂದು ಉತ್ತರಾಖಂಡದ ಬಿಜೆಪಿ ವಕ್ತಾರ ಹಾಗೂ ಶಾಸಕ ಖಜಾನ್ ದಾಸ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಪ್ರವಾಸಿ ಪ್ರಭಾರಿಗಳಾಗಿ ಪಕ್ಷ ನಿಯುಕ್ತಿ ಮಾಡಿದೆ. ರಾಮಾಯಣದಲ್ಲಿ ಲಂಕೆಗೆ ಸೇತುವ ನಿರ್ಮಿಸಿದಂತೆ, ರಾಜ್ಯದಲ್ಲಿ ಪಕ್ಷ ಜಯ ಸಾಧಿಸಲು ಅಳಿಲು ಸೇವೆ ಮಾಡಲಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ದೇಶ ಮತ್ತು ಎಲ್ಲಾ ರಾಜ್ಯಗಳಲ್ಲೂ ನಡೆಯುತ್ತಿದೆ. ಕ್ಷೇತ್ರದಲ್ಲಿಯೂ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ ಅವರು ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಚುನಾವಣೆಯನ್ನು ಎದುರಿಸುತ್ತೇವೆ” ಎಂದರು.
ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಎಸ್. ಕುಮಾರ್ ಬಂಗಾರಪ್ಪ ಮಾತನಾಡಿ, “ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದು ಕೊನೆಯ ಚುನಾವಣೆ ಎಂದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ಸ್ಥಿತಿ ಅಲ್ಲಿಗೆ ಬಂದು ನಿಂತಿದೆ” ಎಂದು ವ್ಯಂಗ್ಯವಾಡಿದರು.
“ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಸಹಕಾರದೊಂದಿಗೆ ಸುಮಾರು 1900 ಕೋಟಿ., ರೂ., ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ಜರುಗಿವೆ. ಅಭಿವೃದ್ಧಿಗಳನ್ನು ಮೆಚ್ಚಿ ಜನತೆ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ” ಎಂದರು.
ಇದನ್ನೂ ಓದಿ: Karnataka Election: ಪಾವಗಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್‌ಗೆ ಬೆಂಬಲ ಸೂಚಿಸಿದ ಯಾದವ ಸಮುದಾಯ
“ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗ್ಯಾರೆಂಟಿ ಕಾರ್ಡ್ ಬೋಗಸ್ ಕಾರ್ಡ್ ಆಗಿದೆ. ಕಾಂಗ್ರೆಸ್ ಘೋಷಣೆ ಮಾಡಿದಂತೆ ಅನುಷ್ಠಾನಕ್ಕೆ ತರಲು ವರ್ಷವೊಂದಕ್ಕೆ ಸುಮಾರು 4 ಲಕ್ಷ ಕೋಟಿ ರೂ., ಬೇಕು. ರಾಜ್ಯದ ಬಜೆಟ್ 3 ಲಕ್ಷ ಕೋಟಿ ಇರುವಾಗ ಗ್ಯಾರೆಂಟಿ ಕಾರ್ಡ್ ಜನತೆಗೆ ಮೂಗಿನ ಮೇಲೆ ತುಪ್ಪ ಸವರುವ ಕೆಲಸವಾಗಿದೆ. ಇದು ಕೇವಲ ಚುನಾವಣೆಯ ಗಿಮಿಕ್ ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣವನ್ನು ಜಮಾ ಮಾಡುವ ಕೆಲಸ ಮಾಡಿದೆ. ಜೆ.ಪಿ. ನಡ್ಡಾ ಅವರು ಆಗಮಿಸಲಿರುವ ಪ್ರಚಾರ ಕಾರ್ಯಕ್ರಮಕ್ಕೆ ಕ್ಷೇತ್ರದ ಎಲ್ಲ ಬೂತ್‍ಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು” ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉತ್ತರಾಖಂಡ ಪ್ರಶಿಕ್ಷಣ ವರ್ಗದ ಸಂಯೋಜಕ ಹಾಗೂ ಪ್ರವಾಸಿ ಪ್ರಭಾರಿ ಕುಂದನ್ ಪರಿಹಾರ್, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಉಪಾಧ್ಯಕ್ಷ ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಶ್ರೀನಾಥ್, ಟೌನ್ ಅಧ್ಯಕ್ಷ ಅಶೋಕ್ ಶೇಟ್, ಜಿಪಂ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್, ಪುರಸಭೆ ಸದಸ್ಯ ಎಂ.ಡಿ. ಉಮೇಶ್, ಪ್ರಮುಖರಾದ ನಾಗಪ್ಪ ವಕೀಲ, ಕನಕದಾಸ ಕಲ್ಲಂಬಿ. ರಂಗನಾಥ ಮೊಗವೀರ್, ಶಿವಕುಮಾರ್, ವಿನಾಯಕ ಬುಳ್ಳೇರ್, ಗುರುಮೂರ್ತಿ ಹಿರೇಶಕುನ ಸೇರಿದಂತೆ ಇತರರಿದ್ದರು.
ಇದೇ ವೇಳೆ ಪ್ರತಿಸ್ಪರ್ಧಿ, ಸಹೋದರನ ಬಗ್ಗೆ ಮಾತನಾಡಿದ ಕುಮಾರ್ ಬಂಗಾರಪ್ಪ ಅವರು, “ಕಳೆದ ಐದು ವರ್ಷಗಳಿಂದ ಶಾಂತವಾಗಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆಯ ದಿನ ಪೊಲೀಸ್ ಇಲಾಖೆಯಿಂದ ದ್ವಿಪಥ ರಸ್ತೆಯ ಒಂದು ಪಥವನ್ನು ನಾಮಪತ್ರ ಸಲ್ಲಿಕೆಯ ಮೆರವಣಿಗೆಗೆ ಅವಕಾಶ ಮಾಡಿಕೊಡಲಾಗಿತ್ತು. ಮತ್ತೊಂದು ಪಥದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮೊಡಿಕೊಡಲಾಗಿತ್ತು. ಆದರೆ, ಆ ರಸ್ತೆಯನ್ನು ಆಕ್ರಮಿಸಿ, ತಮ್ಮ ಕಾರಿನ ಗಾಜು ಒಡೆಯಲು ಮುಂದಾದರು. ನಾಮಪತ್ರ ಸಲ್ಲಿಕೆಗೆ ತೆರಳುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರಚೋದನೆ ನೀಡಿದಂತೆ ವರ್ತಿಸಿದ ದಾಖಲೆಯನ್ನು ಹೊಂದಿದ್ದೇವೆ. ತಾವು ಶಾಂತಿ ಬಯಸುತ್ತಿದ್ದೇವೆ” ಎಂದು ಹೇಳಿದರು.