ಸಾಗರ : “ಕ್ಷೇತ್ರವ್ಯಾಪ್ತಿಯಲ್ಲಿ ಜಾತ್ಯತೀತ ಜನತಾದಳದ (Karnataka Election) ಪರವಾಗಿ ಜನರು ಒಲವು ಹೊಂದಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಜನರಿಗೆ ನೀಡಿದ ಯೋಜನೆಗಳ ಆಧಾರದಲ್ಲಿ ಮತಯಾಚನೆ ನಡೆಸಲಾಗುತ್ತದೆ” ಎಂದು ಜೆಡಿಎಸ್ ಅಭ್ಯರ್ಥಿ ಸೈಯದ್ ಜಾಕೀರ್ ತಿಳಿಸಿದ್ದಾರೆ.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಾಗರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಗುರುತಿಸಿ ಜೆಡಿಎಸ್ ವರಿಷ್ಟ ದೇವೇಗೌಡ, ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಟಿಕೆಟ್ ನೀಡಿದ್ದಾರೆ. ಮತದಾರರು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ” ಎಂದು ಹೇಳಿದರು.
“ಜೆಡಿಎಸ್ ಪ್ರಣಾಳಿಕೆಯಲ್ಲಿ ಪ್ರತಿ ಎಕರೆಗೆ 10ಸಾವಿರ ರೂ., ಆಟೋ ಚಾಲಕರಿಗೆ 2ಸಾವಿರ ರೂ., ವಿಧವೆಯರಿಗೆ 5 ಸಾವಿರ ರೂ., ಪ್ರತಿಮನೆಗೆ ವರ್ಷಕ್ಕೆ 5 ಸಿಲಿಂಡರ್‌ನಂತಹ ಜನಪರ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಯೋಜನೆಗಳು ಜನರ ಮನಸ್ಸಿನಲ್ಲಿದೆ. ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಸನೆ ಈಡೇರಿಸಿದ್ದ ಯಾವುದಾದರೂ ಒಂದು ಪಕ್ಷವಿದ್ದರೆ ಅದು ಜೆಡಿಎಸ್ ಮಾತ್ರ” ಎಂದರು.
ಇದನ್ನೂ ಓದಿ: Karnataka Election 2023: ಏ.30ಕ್ಕೆ ಮೋದಿ ಚನ್ನಪಟ್ಟಣದಲ್ಲಿ ಪ್ರಚಾರ, ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರ ಬದಲು
“ಸಾಗರ ಕ್ಷೇತ್ರವ್ಯಾಪ್ತಿಯ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ, ಹೈಟೆಕ್ ಆಸ್ಪತ್ರೆ, ಸರ್ಕಾರಿ ಶಾಲೆಗಳ ಪುನಶ್ಚೇತನ, ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರು, ರಸ್ತೆ ವ್ಯವಸ್ಥೆ ನಮ್ಮ ಪ್ರಮುಖ ಆಶ್ವಾಸನೆಯಾಗಿದೆ. ಕೆಲವರು ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದು ಬಿಜೆಪಿಯಿಂದ ಹಣ ಪಡೆದಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ” ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ ಮಾತನಾಡಿ, “ಕ್ಷೇತ್ರಾದ್ಯಂತ ಜೆಡಿಎಸ್ ಪ್ರಚಾರ ಆರಂಭಿಸಿದ್ದು ಉತ್ತಮ ಸ್ಪಂದನೆ ಸಿಗುತ್ತಿದೆ. ಬಿಜೆಪಿಯವರು ಮೋದಿ ಮುಖ ನೋಡಿ ಮತ ಕೊಡಿ ಎನ್ನುತ್ತಿದ್ದಾರೆ. ನಾವು ಕುಮಾರಸ್ವಾಮಿ ಕೆಲಸ ನೋಡಿ ಮತಕೊಡಿ ಎಂದು ಪ್ರಚಾರ ಮಾಡುತ್ತಿದ್ದೇವೆ. ನಮ್ಮ ಅಭ್ಯರ್ಥಿ ಪರವಾಗಿ ಕೆಲವರು ಕಪೋಲಕಲ್ಪಿತ ಆರೋಪ ಮಾಡುತ್ತಿದ್ದಾರೆ. ನಮಗೆ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ಶತ್ರುಗಳು” ಎಂದು ತಿಳಿಸಿದರು. ಗೋಷ್ಠಿಯಲ್ಲಿ ಜಯಲಕ್ಷ್ಮೀ ನಾರಾಯಣಪ್ಪ, ಮಹಮದ್ ಇಕ್ಬಾಲ್ ಖಾನ್, ರೊಡ್ಡಿ ದೇವಪ್ಪ, ರಜನಿ ದೇವರಾಜ್, ನಫೀಲ್ ಹಾಜರಿದ್ದರು.