ಸೊರಬ: ವಿಧಾನಸಭಾ ಚುನಾವಣಾ (Karnataka Election) ಹಿನ್ನೆಲೆಯಲ್ಲಿ 80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರು ಮತದಾನ ಮಾಡುವ ಪ್ರಕ್ರಿಯೆಯು ಶನಿವಾರದಿಂದ ಆರಂಭವಾಗಿದ್ದು, ಈ ಬಾರಿಯ ಚುನಾವಣೆಗೆ ಪಟ್ಟಣದ ಚಿಕ್ಕಪೇಟೆ ನಿವಾಸಿ ಕೃಷ್ಣಭಟ್ ಗೋಖಲೆ ಮೊದಲು ಮತ ಚಲಾಯಿಸಿದ್ದಾರೆ.
ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಮತದಾನ ಪ್ರಮಾಣ ಹೆಚ್ಚಿಸಲು ಆಯೋಗ ಹೊಸ ಪರಿಕಲ್ಪನೆಯನ್ನು ಕಂಡುಕೊಂಡಿದೆ.
ಇದನ್ನೂ ಓದಿ: Karnataka Election: ಮೊದಲು ಮತದಾನ ಮಾಡಿದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಲೀಲಾವತಿ
ಈ ಬಗ್ಗೆ ಚುನಾವಣಾಧಿಕಾರಿ ಪ್ರವೀಣ್ ಜೈನ್ ಮಾಹಿತಿ ನೀಡಿ, “ಕ್ಷೇತ್ರದ 10 ಮಾರ್ಗಗಳನ್ನು ಗುರುತಿಸಲಾಗಿದೆ. 162 ಮಂದಿ 80 ವರ್ಷ ಮೇಲ್ಪಟ್ಟವರು ಮತ್ತು 82 ಮಂದಿ ವಿಶೇಷ ಚೇತನರು ಸೇರಿದಂತೆ ಒಟ್ಟು 244 ಮಂದಿ ಮನೆಯಿಂದಲೇ ಮತದಾನ ಮಾಡಲಿದ್ದಾರೆ. ಮನೆಯಲ್ಲಿಯೇ ಮತಗಟ್ಟೆ ಸ್ಥಾಪಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಒಂದನೇ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ, ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ಕ್ಯಾಮರಾಮನ್ ಹಾಗೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಸ್ಥಳೀಯವಾಗಿ ಬಿಎಲ್‌ಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸಹಕಾರ ಮಾಡಲಿದ್ದಾರೆ” ಎಂದು ತಿಳಿಸಿದರು.